ಮಡಿಕೇರಿ ಏ.19 : NEWS DESK : ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡರಿಗೆ 4 ಪಕ್ಷಗಳು ಬೆಂಬಲ ಘೋಷಿಸಿವೆ. ಇಂಡಿಯಾ ಒಕ್ಕೂಟದ ಭಾಗವಾಗಿ ಜಿಲ್ಲೆಯಲ್ಲೂ ಪಂಚ ಪಕ್ಷಗಳ ಸಮಿತಿಯೊಂದನ್ನು ರಚಿಸಿಕೊಂಡಿದ್ದು, ಒಗ್ಗಟ್ಟಾಗಿ ಕಾಂಗ್ರೆಸ್ ನ್ನು ಗೆಲ್ಲಿಸಲು ಶ್ರಮಿಸುವುದಾಗಿ ಮುಖಂಡರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ, ಬಿಜೆಪಿಯನ್ನು ಸೋಲಿಸಲೇಬೇಕೆಂದು ಪಣತೊಟ್ಟು ರಾಷ್ಟ್ರಮಟ್ಟದಲ್ಲಿ ಇಂಡಿಯಾ ಒಕ್ಕೂಟವನ್ನು ರಚಿಸಲಾಗಿದೆ. ಇದರ ಭಾಗವಾಗಿ ಕೊಡಗು ಜಿಲ್ಲೆಯಲ್ಲೂ ಕಾಂಗ್ರೆಸ್ ನೊಂದಿಗೆ ಆಮ್ ಆದ್ಮಿ ಪಾರ್ಟಿ, ಸಿಪಿಎಂ, ಸಿಪಿಐ ಮತ್ತು ಸಿಪಿಐಎಂಎಲ್ ಸೇರಿಕೊಂಡು ಪಂಚ ಪಕ್ಷಗಳ ಸಮಿತಿಯೊಂದನ್ನು ರಚಿಸಲಾಗಿದೆ ಎಂದರು.
ದೇಶದಲ್ಲಿ ಬಿಜೆಪಿಯ ಸರ್ವಾಧಿಕಾರಿ ಆಡಳಿತವನ್ನು ಕೊನೆಗಾಣಿಸಬೇಕಾಗಿದೆ. ಬಡವರು, ಕಾರ್ಮಿಕರು, ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ವಸತಿಹೀನರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಬೇಕಾಗಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವ ಸಿದ್ದಾಂತವನ್ನು ಹೊದಿರುವ ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ಪಕ್ಷಗಳು ಬೆಂಬಲ ಸೂಚಿಸಿವೆ. ಈ ಪಕ್ಷಗಳ ಪ್ರಮುಖರು ಜಿಲ್ಲೆಯಲ್ಲಿ ಎಂ.ಲಕ್ಷ್ಮಣ್ ಗೌಡರ ಪರ ಮತಯಾಚಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ ನಗರದಲ್ಲಿ ಕಾಂಗ್ರೆಸ್ ಸೇರಿದಂತೆ ಐದು ಪಕ್ಷಗಳ ಮುಖಂಡರುಗಳ ಸಭೆ ನಡೆಸಿ ಇಂಡಿಯಾ ಒಕ್ಕೂಟದ ಮಾದರಿಯಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ಅಧ್ಯಕ್ಷರಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಸಂಚಾಲಕರಾಗಿ ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನಿಲ್, ಸದಸ್ಯರುಗಳಾಗಿ ಭೋಜಣ್ಣ ಸೋಮಯ್ಯ, ಡಿ.ಎಸ್.ನಿರ್ವಾಣಪ್ಪ, ಹೆಚ್.ಬಿ.ರಮೇಶ್ ಹಾಗೂ ಕೆ.ವಿ.ರಾಜು ಕಾರ್ಯನಿರ್ವಹಿಸಲಿದ್ದಾರೆ. ಇಂದಿನಿಂದಲೇ ಎಂ.ಲಕ್ಷ್ಮಣ್ ಗೌಡರ ಪರ ಮತಯಾಚಿಸಲಿದ್ದಾರೆ ಎಂದರು.
ಸರ್ವಾಧಿಕಾರ ಮತ್ತು ಭ್ರಷ್ಟಾಚಾರದಿಂದ ಕೂಡಿದ ಆಡಳಿತವನ್ನು ನೀಡಿದ ಬಿಜೆಪಿಯನ್ನು ಸೋಲಿಸುವ ಹಾಗೂ ಬಡವರಿಗೆ ನ್ಯಾಯ ಒದಗಿಸುವ ಏಕೈಕ ಉದ್ದೇಶದಿಂದ ವಿವಿಧ ಪಕ್ಷಗಳು ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸುತ್ತಿದ್ದು, ಎಲ್ಲೂ ಸಂಘರ್ಷಕ್ಕೆ ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದರು.
ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಕಾಂಗ್ರೆಸ್ ನ ನ್ಯಾಯಸಮ್ಮತ ಭರವಸೆಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಪರಿಶಿಷ್ಟರು, ಬುಡಕಟ್ಟು ಜನರು, ಅಲ್ಪಸಂಖ್ಯಾತರು ಹಾಗೂ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕೊಡಗು ಜಿಲ್ಲೆಯಲ್ಲಿ ಎಡ ಪಕ್ಷ ಮತ್ತು ಪ್ರಗತಿಪರ ಪಕ್ಷಗಳು ಒಂದೇ ವೇದಿಕೆಯಡಿ ಕಾಂಗ್ರೆಸ್ ಗೆಲುವಿಗಾಗಿ ಶ್ರಮಿಸುತ್ತಿವೆ ಎಂದು ಟಿ.ಪಿ.ರಮೇಶ್ ಹೇಳಿದರು.
ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ.ರಮೇಶ್ ಮಾತನಾಡಿ ಬಡವರು, ಕೂಲಿ ಕಾರ್ಮಿಕರು ಹಾಗೂ ನೊಂದವರಿಗೆ ನ್ಯಾಯ ಒದಗಿಸುವುದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡರಿಗೆ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಸಿಪಿಐಎಂಎಲ್ ರಾಜ್ಯ ಸಂಘಟಕ ಡಿ.ಎಸ್.ನಿರ್ವಾಣಪ್ಪ ಮಾತನಾಡಿ ಕಳೆದ 10 ವರ್ಷಗಳ ಕಾಲ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರ ಜನವಿರೋಧಿ ನೀತಿಗಳನ್ನು ಅನುಸರಿಸಿದೆ. ಅಭಿವೃದ್ಧಿಯನ್ನು ಮರೆತು ಭಾವನಾತ್ಮಕ ವಿಚಾರಗಳನ್ನಷ್ಟೇ ಮುಂದಿಟ್ಟುಕೊಂಡು ಸರ್ವಾಧಿಕಾರ ಮೆರೆದಿದೆ. ಆದಿವಾಸಿಗಳಿಗೆ, ಪರಿಶಿಷ್ಟರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ನ್ಯಾಯ ನೀಡಿಲ್ಲ, ಸಂವಿಧಾನ ಅಪಾಯದಲ್ಲಿದೆ ಎಂದು ಆರೋಪಿಸಿದರು.
ಎನ್‍ಡಿಎ ಮೈತ್ರಿ ಕೂಟವನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಿರುವುದಾಗಿ ತಿಳಿಸಿದರು.
ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಮಾತನಾಡಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಸರ್ವಾಧಿಕಾರದಿಂದ ಬಂಧಿಸಲಾಗಿದೆ. ಬಿಜೆಪಿ ಆಡಳಿತದ ದಬ್ಬಾಳಿಕೆಯನ್ನು ತಡೆಯಬೇಕಾಗಿದೆ. ಕಳೆದ 10 ವರ್ಷಗಳಿಂದ ಸುಳ್ಳುಗಳ ಮೂಲಕವೇ ಅಧಿಕಾರ ನಡೆಸಿರುವ ಎನ್‍ಡಿಎ ಮೈತ್ರಿಕೂಟ ಇದೀಗ ಮತ್ತೆ ಮೋದಿ ಅವರ ಹೆಸರು ಹೇಳಿಕೊಂಡು ಮತಯಾಚಿಸುತ್ತಿದೆ ಎಂದು ಟೀಕಿಸಿದರು.
ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಮಿತಿ ಮೀರಿದ ಸಾಲ, ರೈತರ ಕಡೆಗಣನೆ ಸೇರಿದಂತೆ ಆಡಳಿತ ವೈಫಲ್ಯ ವಿರುದ್ಧ ಜನ ಈ ಬಾರಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನಿಲ್ ಮಾತನಾಡಿ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು.








