ವಿರಾಜಪೇಟೆ ಏ.19 NEWS DESK : ಹಣದಿಂದ ಜೀವವನ್ನು ಉಳಿಸಲು ಸಾಧ್ಯವಿಲ್ಲ. ರಕ್ತದಾನದಿಂದ ಮಾತ್ರ ಜೀವವನ್ನು ಉಳಿಸಲು ಸಾಧ್ಯ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ. ಫಾ. ಐಸಾಕ್ ರತ್ನಾಕರ್ ಅಭಿಪ್ರಾಯಪಟ್ಟರು.
ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ, ಎನ್. ಎಸ್. ಎಸ್ ಘಟಕಗಳು, ಮೈಸೂರಿನ ಸಂತ ಜೋಸೆಫರ ಆಸ್ಪತ್ರೆಯ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವನ ಜೀವನ ಸ್ವಾರ್ಥ ರಹಿತವಾಗಿರಬೇಕು. ಪ್ರತಿಯೊಬ್ಬರು ರಕ್ತದ ಮಾಲೀಕರಾಗಿದ್ದು, ಅದರ ಜೊತೆಯಲ್ಲಿ ರಕ್ತದಾನಿಗಳು ಆಗಬೇಕೆಂದರು. ಆರೋಗ್ಯ ಜಾಗೃತಿಯಲ್ಲಿ ರೆಡ್ ಕ್ರಾಸ್ ಮತ್ತು ಎನ್. ಎಸ್. ಎಸ್ ಘಟಕಗಳ ಕಾರ್ಯವೈಖರಿ ಶ್ಲ್ಯಾಘನೀಯವಾಗಿದೆ ಎಂದರು. ಮಾತ್ರವಲ್ಲದೆ ಆರೋಗ್ಯ ರಕ್ಷಣೆಗೆ ಎಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು.
ಮೈಸೂರಿನ ಸಂತ ಜೋಸೆಫರ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಘಟಕದ ಅಧಿಕಾರಿ ಮೊಹಮ್ಮದ್ ಇಬ್ರಾಹಿಂ ಮಾತನಾಡಿ, ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವವನ್ನು ವಿವರಿಸಿದರು. ರಕ್ತದಾನ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ರಕ್ತದಾನವು ಸರ್ವ ಶ್ರೇಷ್ಠ ದಾನಗಳಲ್ಲಿ ಒಂದಾಗಿದ್ದು, ವಿದ್ಯಾರ್ಥಿಗಳು ಅದರ ಮಹತ್ವವನ್ನು ಅರಿಯಬೇಕು ಎಂದರು. ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ತನ್ನ ಸೇವೆಯನ್ನು ಸಲ್ಲಿಸಿದರೇ ಸಾರ್ಥಕ್ಯ ಬದುಕು ನಮ್ಮದಾಗುತ್ತದೆ ಎಂದರು.
ಸಂತ ಜೋಸೆಫರ ಆಸ್ಪತ್ರೆಯ ವತಿಯಿಂದ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಾಕರ್ ಮತ್ತು ಕಾಲೇಜಿನ ಎನ್. ಎಸ್. ಎಸ್ ಅಧಿಕಾರಿ ಬಿ. ಎನ್. ಶಾಂತಿಭೂಷಣ್ ಅವರನ್ನು ಸನ್ಮಾನಿಸಲಾಯಿತು.
ಸಂತ ಅನ್ನಮ್ಮ ಚರ್ಚ್ ನ ಸಹಾಯಕ ಗುರುಗಳಾದ ಫಾ. ಚಾರ್ಲ್ಸ್, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೇಸ್, ಉಪನ್ಯಾಸಕರು ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿ ಸೃಜನ ದೇಚಮ್ಮ ನಿರೂಪಿಸಿದರು, ತಶ್ಮ ಸ್ವಾಗತಿಸಿದರು, ಧನ್ಯರವರು ವಂದಿಸಿದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.