ಮಡಿಕೇರಿ ಏ.21 NEWS DESK : ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದು ಕೊಡಗಿನ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಡಿಕೇರಿ ನಗರದ ವಿವಿಧ ವಾರ್ಡ್ ಗಳಲ್ಲಿ ಜಂಟಿಯಾಗಿ ಚುನಾವಣಾ ಪ್ರಚಾರ ನಡೆಸಿದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಯದುವೀರ್ ಒಡೆಯರ್ ರಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು ದೇಶವ್ಯಾಪಿ ಬಿಜೆಪಿ ಪರ ಅಲೆ ಇದೆ. ರಾಜ್ಯದಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಬಹುಮತ ಗಳಿಸಲಿದೆ ಎಂದರು. ಚುನಾವಣೆ ದಿನ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಜಂಟಿಯಾಗಿ ಮತಗಟ್ಟೆ ಬಳಿ ಇರಲಿದ್ದಾರೆ. ಜಿಲ್ಲೆಯ ಮತದಾರರು ಯದುವೀರ್ ಅವರ ಪರ ಒಲವು ತೋರುತ್ತಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದರು. ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ ಯದುವೀರ್ ಒಡೆಯರ್ ಅವರು 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಆ ನಿಟ್ಟಿನಲ್ಲಿ ಜೆಡಿಎಸ್ ಸಂಪೂರ್ಣ ಬೆಂಬಲಕ್ಕೆ ನಿಂತಿದೆ ಎಂದು ತಿಳಿಸಿದರು. ಪ್ರಚಾರದ ಸಂದರ್ಭ ನಗರಸಭಾ ಸ್ಥಾಯಿ ಸಮಿತಿ ಅದ್ಯಕ್ಷ ಸತೀಶ್ ಎಸ್.ಸಿ, ಕೆ.ಎಸ್.ರಮೇಶ್, ಅಪ್ಪಣ್ಣ, ಮಂಜುಳಾ, ಶ್ವೇತಾ ಪ್ರಶಾಂತ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕನ್ನಿಕೆ ದಿನೇಶ್, ಜೆಡಿಎಸ್ ಮಹಿಳಾ ಅಧ್ಯಕ್ಷೆ ಬಿ.ಬಿ.ಪುಷ್ಪಾವತಿ, ಕಾರ್ಯದರ್ಶಿ ಗುಲಾಬಿ ಜನಾರ್ಧನ್, ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ತೀರ್ಥಾನಂದ, ಪಕ್ಷದ ಪದಾದಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.