ಚೆಟ್ಟಳ್ಳಿ ಏ.22 NEWS DESK : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ತರಬೇತಿ ನಡೆಯುತ್ತಿದ್ದು, ಸಹಕಾರ ಸಂಘಗಳ ಎಲ್ಲಾ ಸಿಬ್ಬಂದಿಗಳನ್ನು ನಿರಂತರ ತರಬೇತಿಗೆ ಬಳಸಿಕೊಳ್ಳುವುದು ಸರಿಯಲ್ಲವೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಆರೋಪಿಸಿದ್ದಾರೆ.
ಸಹಕಾರ ಸಂಘದ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿ ನೀಡಿದ ಪರಿಣಾಮ ಸಂಘವನ್ನು ಮುಚ್ಚಲಾಗಿತ್ತು. ಇದೀಗ ಮತ್ತೊಮ್ಮೆ ಸಹಕಾರ ಸಂಘದ ಸಿಬ್ಬಂದಿಗಳಿಗೆಲ್ಲ ತರಬೇತಿ ನೀಡಲು ಆದೇಶಿಸಿದ್ದು, ಸಂಘವನ್ನು ಕಾರ್ಯನಿರ್ವಹಿಸಲು ಸಿಬ್ಬಂದಿಗಳಿಲ್ಲದೆ ಸಂಘವನ್ನು ಮುಚ್ಚುವ ಪರಿಸ್ಥಿತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯರಿಗೆ ನಿರಂತರ ತರಬೇತಿ ನೀಡುತ್ತಿರುವುದರಿಂದ ಸಹಕಾರ ಸಂಘದಲ್ಲಿ ರೈತರಿಗೆ ಕೆಸಿಸಿಸಾಲ ಹಾಗೂ ಕೃಷಿ ಸಾಲ ಮರುಪಾವತಿ ನೀಡಲು ತೊಂದರೆಯಾಗುತ್ತಿದೆ. ಚೆಟ್ಟಳ್ಳಿ ಸಹಕಾರ ಸಂಘದ ಶೇ.50 ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿಕೊಂಡು ಉಳಿದ ಸಿಬ್ಬಂದಿಗಳನ್ನು ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂದು ಈಗಾಗಲೇ ಚುನಾವಣಾ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಮಣಿಉತ್ತಪ್ಪ ತಿಳಿಸಿದರು.
ರೈತ ಕೃಷಿ ಸಾಲ ಮರಪಾತಿಯ ಸಮಯಮೀರಿದರೆ ಸರಕಾರ ಕೃಷಿ ಸಾಲದ ಮೇಲಿನ ಶೂನ್ಯಬಡ್ಡಿದರ ದೊರೆಯುವುದಿಲ್ಲ. ಆದರಿಂದ ಈ ಆದೇಶವನ್ನು ಹಿಂಪಡೆದು ಸಹಕಾರ ಸಂಘದ ಶೇ.50 ರಷ್ಟು ಮಾತ್ರ ಬಳಸಿಕೊಂಡು ಪಾರದರ್ಶಕವಾಗಿ ಚುನಾವಣೆ ನಡೆಯಲೆಂದು ಮಣಿಉತ್ತಪ್ಪ ಮನವಿ ಮಾಡಿದರು.