
ಚೆಟ್ಟಳ್ಳಿ ಏ.25 NEWS DESK : ವಿರಾಜಪೇಟೆಯ ಚೆಂಬೆಬೆಳ್ಳೂರಿನ ವಾರ್ಷಿಕ ಬೋಡ್ನಮ್ಮೆಯು ಶ್ರದ್ಧಾಭಕ್ತಿಯಿಂದ ನೆರವೇರಿತು.
ಹುಲಿವೇಷದಾರಿಗಳು, ದೋಳ್ ಪಾಟ್, ಬಂಡ್ ಕಳಿ( ಕೆಸರು ವೇಷ), ಪಿಲ್ಲ್ ಭೂತ, ಕಾಪಳ ವೇಷದಾರಿಗಳ ಕುಣಿತ ಗಮನ ಸೆಳೆಯಿತು.
ಪಟ್ಟಣಿ ಹಬ್ಬದೊಂದಿಗೆ ಆರಂಭವಾದ ಬೋಡ್ನಮ್ಮೆಯು ಪಣಿಕರಡೋಲಿನಕೊಟ್ಟು ಹಾಗೂ ಕೊಂಬಿನ ಊದಿದ ನಂತರ ಊರಿನವರು ಸಂಪ್ರದಾಯದಂತೆ ಪಟ್ಟಣಿ ಮುರಿಯಲಾಯಿತು. ಹಿರಿಯರು, ಕಿರಿಯರೆಲ್ಲ ದೇವರ ನೆಲೆಯ ಸುತ್ತಲೂ ಕುಣಿಯುತಾ ಪ್ರದಕದಕ್ಷಿಣೆ ಬಂದು ಹರಕೆ ಕಾಣಿಕೆಯನ್ನು ದೇವರಿಗೆ ಅರ್ಪಿಸಿದರು.
ವಿವಿಧ ಬಗೆಯ ಹೆಣ್ಣಿನ ವೇಷ, ಗಗನ ಸಖಿಯರ ತಂಡ, ಲಂಬಾಣಿ ವೇಷ, ರಾಮಲಕ್ಷ್ಮಣರು, ರಾಜಸ್ತಾನಿ ನೃತ್ಯ ಇತ್ಯಾದಿ ವೈಭವ ಕಣ್ಮನ ಸೆಳೆಯಿತು.
ಹಬ್ಬದ ಅಂಗವಾಗಿ ಭದ್ರಕಾಳಿ ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಪೊದಕೇರಿ, ಪೊದಕೋಟೆ ಹಾಗೂ ನಡಿಕೇರಿ ಊರಿನ ಮೂರು ಕೇರಿಯಿಂದ ಬೆತ್ತದಿಂದ ಮಾಡಿ ಶೃಗಂರಿಸಿದ ಕೃತಕ ಮೂರು ಕುದುರೆಯೊಂದಿಗೆ ಊರಿನವರು ಅಂಬಲಕ್ಕೆ ಬಂದು ದೇವಾಲಯದಲ್ಲಿ ಸೇರುವ ಮೂಲಕ ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
ರಾತ್ರಿ ಊರಿನವರು, ಹರಕ್ಕೆ ಹೊತ್ತವರು ಮೈ ಯಲ್ಲೆಲ್ಲ ಬಣ್ಣಬಳಿದು ವಿಧದ ವೇಶಕಟ್ಟಿ ಮನೆಮನೆಗೆ ತೆರಳಿದರು. ನಂತರ ತಮಟೆವಾದ್ಯಕ್ಕೆ ಹಜ್ಜೆಹಾಕುತ್ತಾ ದೇವಾಲಯಕ್ಕೆ ತಂಡೋಪತಂಡವಾಗಿ ಬಂದು ದೇವರ ನೆಲೆಗೆಯಲ್ಲಿ ಭಕ್ತಿಯನ್ನು ಅರ್ಪಿಸಿದರು.
ವರದಿ : ಪುತ್ತರಿರ ಕರುಣ್ ಕಾಳಯ್ಯ









