ಮಡಿಕೇರಿ ಏ.25 NEWS DESK : ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2002 ರ ನ.4 ರಂದು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಪ್ರಾರಂಭಗೊಂಡ `ಸಾಂತ್ವನ ಮಹಿಳಾ ಸಹಾಯವಾಣಿ’ ಕೊಡಗಿನಾದ್ಯಂತ ಸಮಾಜದ ನೊಂದ ಮಹಿಳೆಯರು ಪ್ರತಿಯೊಂದು ಸ್ತರದಲ್ಲಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ದಾಖಲಿಸಿಕೊಂಡು ತಕ್ಷಣಕ್ಕೆ ಸರಿಯಾದ ಸಲಹೆ ಸೂಚನೆಗಳನ್ನು ನೀಡಿ ನೆರವು ಕಲ್ಪಿಸುತ್ತಾ ಬಂದಿರುತ್ತದೆ.
ಸಾಂತ್ವನ ಕೇಂದ್ರದಲ್ಲಿ ಈವರೆಗೆ 5118 ವಿವಿಧ ಸ್ವರೂಪದ ಪ್ರಕರಣಗಳು ದಾಖಲಾಗಿದ್ದು, 5103 ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ. 2023-24ನೇ ಆರ್ಥಿಕ ಸಾಲಿನಲ್ಲಿ 314 ಪ್ರಕರಣಗಳು ದಾಖಲಾಗಿ 299 ಪ್ರಕರಣಗಳು ಇತ್ಯರ್ಥಗೊಂಡು ಹಿಂದಿನ ಸಾಲಿನ ಉಳಿಕೆ ಪ್ರಕರಣಗಳು ಸೇರಿ, ಉಳಿದ 15 ಪ್ರಕರಣಗಳು ಇತ್ಯರ್ಥದ ಹಂತದಲ್ಲಿರುತ್ತದೆ.
ಈವರೆಗೆ ವಿವಿಧ ಸ್ವರೂಪದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ರೂ. 35 ಲಕ್ಷ ಗಳನ್ನು ಸಾಂತ್ವನ ಕೇಂದ್ರ ಹಾಗೂ ನ್ಯಾಯಾಲಯದ ಮೂಲಕ ಫಲಾನುಭವಿಗಳಿಗೆ 2023-24ನೇ ಸಾಲಿನಲ್ಲಿ ಕೊಡಿಸಿಕೊಡಲಾಗಿದೆ. ಮಹಿಳಾ ಸಹಾಯವಾಣಿಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಾಂತ್ವನ ಕೇಂದ್ರದ ಅಧ್ಯಕ್ಷರಾದ ಕೆ.ಎಸ್.ಪ್ರಕಾಶ್ ಹಾಗೂ ಕಾರ್ಯದರ್ಶಿ ನಮಿತ ಆರ್ ರೈ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9880985939(ಕಚೇರಿ) ನ್ನು ಸಂಪರ್ಕಿಸಬಹುದು.