ಮಡಿಕೇರಿ ಮೇ 4 NEWS DESK : ಕುತಂತ್ರದಿಂದ ಕೊಡವರ ಹತ್ಯೆಯಾದ ದೇವಟ್ ಪರಂಬು ಸ್ಮಾರಕ ಪ್ರದೇಶದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಾಸಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿತು.
ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ದೇವಟ್ ಪರಂಬುವಿಗೆ ತೆರಳಿದ ಪ್ರಮುಖರು ಹಿರಿಯರಿಗೆ ಪುಷ್ಪನಮನ ಸಲ್ಲಿಸಿ ಕೊಡವಲ್ಯಾಂಡ್ ಪರ ಹಕ್ಕೊತ್ತಾಯ ಮಂಡಿಸಿದರು. ಗಾಳಿಯಲ್ಲಿ ಗುಂಡು ಹಾರಿಸಿ ಹಿರಿಯರಿಗೆ ಗೌರವ ಅರ್ಪಿಸಿದರು.
ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು, ಆದಿಮಸಂಜಾತ ಕೊಡವ ಜನಾಂಗೀಯ ಬುಡಕಟ್ಟು ಜನಾಂಗಕ್ಕೆ ಎಸ್‍ಟಿ ಟ್ಯಾಗ್ ಕಲ್ಪಿಸಬೇಕು, ಕೊಡವ ಭೂಮಿ, ಭಾμÉ, ಸಾಂಸ್ಕøತಿಕ ಪರಂಪರೆಯ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಸಾಂವಿಧಾನಿಕ ಖಾತ್ರಿ ಒದಗಿಸಬೇಕು, ಕೊಡವ ಸಾಂಪ್ರದಾಯಿಕ “ಸಂಸ್ಕಾರ ಗನ್” ಹಕ್ಕಿಗೆ ಸಾಂವಿಧಾನಿಕ ಭದ್ರತೆ ನೀಡಬೇಕು, ಟಿಪ್ಪು ಸಂಚಿನಿಂದ ದೇವಟ್ ಪರಂಬುವಿನಲ್ಲಿ ನಡೆದ ನರಮೇಧದ ಸ್ಮರಣಾರ್ಥ ಅಂತರರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡಬೇಕು ಹಾಗೂ ಕೊಡವರ ನರಮೇಧವನ್ನು ವಿಶ್ವ ರಾಷ್ಟ್ರಸಂಸ್ಥೆ ಯುಎನ್‍ಒ ಅಂತರರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಈ ಹಕ್ಕುಗಳು ಶೀಘ್ರ ಈಡೇರಲಿ ಎಂದು ಹಿರಿಯರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಪ್ರಮುಖರಾದ ಪಟ್ಟಮಾಡ ಕುಶ, ಅರೆಯಡ ಗಿರೀಶ್, ಮಂದಪಂಡ ಮನೋಜ್, ಪುಟ್ಟಿಚಂಡ ದೇವಯ್ಯ, ಪುದಿಯೊಕ್ಕಡ ಕಾಶಿ, ಸುಳ್ಳಿಮಾಡ ಸುತನ್, ಸುಳ್ಳಿಮಾಡ ನಾಣಯ್ಯ, ಅರೆಯಡ ಸಾವನ್ ಹಾಜರಿದ್ದು ಪುಷ್ಪ ನಮನ ಸಲ್ಲಿಸಿದರು.