ಮಡಿಕೇರಿ ಮೇ 5 NEWS DESK : ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ನಂತರ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.
2022 ಜೂ.8 ರಂದು 8.30 ಗಂಟೆಗೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಂಗಿ ನಿವಾಸಿ ತಂಗಪ್ಪನ್.ಕೆ.ಕೆ ಎಂಬುವವರ ಮನೆಗೆ ಅಪರಿಚಿತ ಮುಸುಕುಧಾರಿ ವ್ಯಕ್ತಿಗಳು ನುಗ್ಗಿ ತಂಗಪ್ಪನ್ ಹಾಗೂ ಪತ್ನಿಯ ಮೇಲೆ ಹಲ್ಲೆ ಮಾಡಿ, ಬೆದರಿಸಿ ಮನೆಯಲ್ಲಿದ್ದ ಅಂದಾಜು ರೂ.2ಲಕ್ಷ ಹಾಗೂ 8 ಗ್ರಾಂ ತೂಕದ ಚಿನ್ನದ ಸರವನ್ನು ಕದ್ದೊಯ್ದಿದ್ದರು. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಚನ್ನಂಗಿ ನಿವಾಸಿ ಲವಕುಮಾರ್ ಎಂ.ಕೆ (51), ಅತ್ತೂರಿನ ವಿನೋದ್ ಹೆಚ್.ಸಿ (45), ವಿರಾಜಪೇಟೆಯ ಅಯ್ಯಪ್ಪ ಬೆಟ್ಟ ಸಮೀಪದ ಅನೀಶ್ ಪಿ.ಎಸ್ (33), ಅತ್ತೂರಿನ ಪ್ರವೀಣ್ ಕುಮಾರ್ (46) ಹಾಗೂ ಭದ್ರಗೊಳದ ರಫೀಕ್ ಕೆ.ಈ (45) ಎಂಬುವವರನ್ನು ಬಂಧಿಸಿದ್ದಾರೆ.
ಬAಧಿತ ಆರೋಪಿಗಳ ಬಳಿಯಿಂದ ರೂ.60 ಸಾವಿರ ನಗದು, 7.9 ಗ್ರಾಂ ಚಿನ್ನದ ಸರ, ಕೃತ್ಯಕ್ಕೆ ಬಳಸಿದ ಕಾರು ಹಾಗೂ ಕಳ್ಳತನದ ಹಣದಿಂದ ಖರೀದಿಸಿದ ಮತ್ತೊಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್, ಮಡಿಕೇರಿ ನಗರ ವೃತ್ತದ ಸಿಪಿಐ ರಾಜು ಪಿ.ಕೆ, ಪಿಎಸ್ಐಗಳಾದ ರಾಘವೇಂದ್ರ ಹಾಲಪ್ಪ.ಆರ್.ಎಸ್, ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಡಿಸಿಆರ್ಬಿ ಹಾಗೂ ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿತು.
ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘಿಸಿದ್ದಾರೆ. ಯಾವುದೇ ಅನುಮಾನಸ್ಪದ ವ್ಯಕ್ತಿಗಳು ಕಂಡುಬAದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಎಸ್ಪಿ ಮನವಿ ಮಾಡಿದ್ದಾರೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.