ಮಡಿಕೇರಿ ಮೇ 13 NEWS DESK : ವಿರಾಜಪೇಟೆ ತಾಲ್ಲೂಕಿನ ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ನಿರಂತರ ಉಪಟಳ ನೀಡುತ್ತಿರುವ ಮೂರು ಪುಂಡಾನೆಗಳನ್ನು ಸೆರೆಹಿಡಿದು ‘ರೇಡಿಯೋ ಕಾಲರ್’ ಅಳವಡಿಕೆಗೆ ಅರಣ್ಯ ಇಲಾಖೆ ಮುಂದಾಗಿದ್ದು, ಕಾರ್ಯಾಚರಣೆ ಮೇ 14 ರಿಂದ ಆರಂಭಗೊಳ್ಳಲಿದೆ.
ವಿರಾಜಪೇಟೆ ವಿಭಾಗದ ತಿತಿಮತಿ ವಲಯ ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಗ್ರಾಮದ ಬಿಬಿಸಿಟಿ ಎಲಿಕಲ್ ಕಾಫಿ ತೋಟ ಸೇರಿದಂತೆ ಸುತ್ತಮುತ್ತಲ ತೋಟಗಳಲ್ಲಿ ನೆಲೆ ನಿಂತಿರುವ ಈ ಪುಂಡಾನೆಗಳು, ಕಳೆದ ಹಲ ಸಮಯಗಳಿಂದ ಕೃಷಿ ಫಸಲನ್ನು ಹಾಳು ಗೆಡಹಿ, ಜನ ಜಾನುವಾರುಗಗಳ ಮೇಲೆ ದಾಳಿ ನಡೆಸುತ್ತ ಆತಂಕ ಸೃಷ್ಟಿಸುತ್ತಿವೆ.
ಗ್ರಾಮೀಣ ಜನರ ಆತಂಕಕ್ಕೆ ಕಾರಣವಾಗಿರುವ ಈ ಪುಂಡಾನೆಗಳನ್ನು ಸೆರೆಹಿಡಿದು, ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಈ ಸಂದರ್ಭ ಯಾವುದೇ ಅವಘಡಗಳು ಆಗದಂತೆ ಬಾಡಗ ಬಾಣಂಗಾಲ ಒಳಗೊಂಡಂತೆ ಮೇಕೂರು, ಹೊಸ್ಕೇರಿ, ಮಾಲ್ದಾರೆ, ಚೆನ್ನಯ್ಯನಕೋಟೆ, ಕರಡಿಗೋಡು, ಪುಲಿಯೇರಿ, ಹೊಸೂರು, ಇಂಜಿಲಗೆರೆ ವ್ಯಾಪ್ತಿಯ ಗ್ರಾಮಸ್ಥರು, ಸಾರ್ವಜನಿಕರು, ತೋಟ ಮಾಲೀಕರು, ಕಾರ್ಮಿಕರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇರಬೇಕೆಂದು ಇಲಾಖಾ ಪ್ರಕಟಣೆಯಲ್ಲಿ ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ.