ಮಡಿಕೇರಿ ಮೇ 15 NEWS DESK : ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡಲಾಗುವ ಕೆಸಿಸಿ ಫಸಲು ಸಾಲಕ್ಕೆ ಫ್ರೂಟ್ ತಂತ್ರಾಂಶದಿಂದ ವಿನಾಯಿತಿ ನೀಡಬೇಕೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2024-25ನೇ ಸಾಲಿಗೆ ರೈತರಿಗೆ ಕೆಸಿಸಿ ಫಸಲು ಸಾಲ ವಿತರಿಸಲಾಗುತ್ತಿದೆ. ಆದರೆ ಸಂಘದ ಕಾರ್ಯವ್ಯಾಪ್ತಿಗೆ ಬರುವ ಶೇ.40 ರಷ್ಟು ಸದಸ್ಯರುಗಳು ಜಂಟಿ ಪಹಣಿ ಹೊಂದಿರುವುದರಿಂದ ಇವರುಗಳು ಹೊಂದಿರುವ ನೈಜ ಆಸ್ತಿಯು ಫ್ರೂಟ್ ತಂತ್ರಾಂಶದಲ್ಲಿ ನಮೂದಾಗಿಲ್ಲ. ಇದರಿಂದ ಸಂಘದಿಂದ ನೀಡಲಾಗುತ್ತಿರುವ ಕೆಸಿಸಿ ಫಸಲು ಸಾಲದಿಂದ ಇವರು ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಂಟಿ ಪಹಣಿಯಿಂದ ಫ್ರೂಟ್ ತಂತ್ರಾಂಶದಲ್ಲಿ ಆಸ್ತಿ ನಮೂದಾಗದ ಕಾರಣ ಕೃಷಿಕರು ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಶೂನ್ಯ ಬಡ್ಡಿ ದರದ ಸಾಲವನ್ನು ಕೂಡ ಪಡೆಯಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಫ್ರೂಟ್ ತಂತ್ರಾಂಶ ಪ್ರಕ್ರಿಯೆ ವಿಳಂಬವಾಗುತ್ತಿದೆ. ದಲ್ಲಾಳಿಗಳು ಏಕರೆಗೆ 35 ಸಾವಿರದಿಂದ 50 ಸಾವಿರದವರೆಗೆ ಹಣ ಪಡೆದು ಕಡತ ವಿಲೇವಾರಿ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಎಲ್ಲಾ ರೈತರಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣ ನೀಡಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಸರಕಾರ ಈ ಗೊಂದಲ ನಿವಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೊಡಗು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಾಲ ಪಡೆದು ರೈತರಿಗೆ ಕೆಸಿಸಿ ಫಸಲು ಸಾಲವನ್ನು ನೀಡುತ್ತಿತ್ತು. ಆದರೆ ಸಂಘದ ಶೇ.40 ರಷ್ಟು ಸದಸ್ಯರುಗಳ ಆಸ್ತಿ ಫ್ರೂಟ್ ತಂತ್ರಾಂಶದಲ್ಲಿ ನಮೂದಾಗದೆ ಇರುವುದರಿಂದ ಇಷ್ಟು ಮೊತ್ತದ ಹಣ ಡಿಸಿಸಿ ಬ್ಯಾಂಕ್ ನಿಂದ ಸಂಘಕ್ಕೆ ಬಿಡುಗಡೆಯಾಗುವುದಿಲ್ಲ. ಇದರಿಂದ ಡಿಸಿಸಿ ಬ್ಯಾಂಕ್ ಗೂ ನಷ್ಟವಾಗಲಿದೆ. ರೈತರನ್ನು ಬರಿಗೈಯಲ್ಲಿ ಕಳುಹಿಸಬಾರದು ಎನ್ನುವ ಕಾರಣಕ್ಕಾಗಿ ಸಂಘದಲ್ಲಿರುವ ಹಣವನ್ನೇ ಕೆಸಿಸಿ ಫಸಲು ಸಾಲವನ್ನು ನೀಡಲು ಬಳಕೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಮಣಿ ಉತ್ತಪ್ಪ ಗಮನ ಸೆಳೆದರು.
ಕಳೆದ ಬಾರಿ ಕೆಸಿಸಿ ಫಸಲು ಸಾಲಕ್ಕೆ ಫ್ರೂಟ್ ತಂತ್ರಾಂಶದಿಂದ ವಿನಾಯಿತಿ ನೀಡಿದಂತೆ ಈ ಬಾರಿಯೂ ನೀಡಿ ರೈತರ ಹಿತ ಕಾಯಬೇಕೆಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಪೇರಿಯನ ಪೂಣಚ್ಚ, ನಿರ್ದೇಶಕರಾದ ಬಿ.ಎಂ.ಕಾಶಿ, ಬಟ್ಟೀರ ಶರಿನ್, ಕರ್ಣಯ್ಯನ ಪ್ರಜ್ವಲ್ ಹಾಗೂ ಪುತ್ತರಿರ ಶಿವು ನಂಜಪ್ಪ ಉಪಸ್ಥಿತರಿದ್ದರು.