ಮಡಿಕೇರಿ ಮೇ 23 NEWS DESK : ಪೊನ್ನಂಪೇಟೆ ಹಾಕಿ ಟರ್ಫ್ ಮೈದಾನದಲ್ಲಿ ನಡೆದ ಅಂತರ್ ಕಾಲೇಜು ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ ಪ್ರಶಸ್ತಿಯನ್ನು ಮಡಿಕೇರಿಯ ಪೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ತಂಡ ತನ್ನ ಮುಡಿಗೇರಿಸಿಕೊಂಡಿದ್ದು, ರನ್ನರ್ಸ್ ಅಪ್ ಪ್ರಶಸ್ತಿಗೆ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡ ಭಾಜನವಾಗಿದೆ.
ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ಬಿ.ಬಿ.ಎ. ವಿಭಾಗ ಮತ್ತು ದೈಹಿಕ ಶಿಕ್ಷಣ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಡೆದ ಪಂದ್ಯಾವಳಿಯಲ್ಲಿ ರಾಜ್ಯದ ಪ್ರತಿಷ್ಠಿತ 16 ಕಾಲೇಜುಗಳ 124 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮ ಪಂದ್ಯದಲ್ಲಿ ಮಡಿಕೇರಿಯ ಎಫ್.ಎಂ.ಸಿ. ಕಾಲೇಜು ಎ ತಂಡ ಟೈಬ್ರೇಕರ್ ಮೂಲಕ 6-5 ಗೋಲುಗಳ ಅಂತರದಿಂದ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ಎ ತಂಡದ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಸಿಕೊಂಡಿತು. ನಿಗದಿತ ಅವಧಿಯಲ್ಲಿ ಈ ತಂಡಗಳು ತಲಾ 3 ಗೋಲು ಗಳಿಸಿದ್ದವು.
ವಿಜೇತ ತಂಡಗಳಿಗೆ ಟ್ರೋಫಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಪಂದ್ಯಾವಳಿಯ ಉತ್ತಮ ಗೋಲು ಕೀಪರ್ ಪ್ರಶಸ್ತಿಯನ್ನು ಎಫ್.ಎಂ.ಸಿ. ಕಾಲೇಜಿನ ಯಶ್ವಂತ್, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಸುಬ್ರಮಣಿ, ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಎಫ್.ಎಂ.ಸಿ. ಕಾಲೇಜಿನ ಸುಗುಣ ಮತ್ತು ಶಿಸ್ತು ಬದ್ಧ ಆಟಗಾರನಾಗಿ ಕಾವೇರಿ ಕಾಲೇಜಿನ ಪೊನ್ನಣ್ಣ ಅವರುಗಳು ವೈಯುಕ್ತಿಕ ಪ್ರಶಸ್ತಿಗಳಿಗೆ ಪಾತ್ರರಾದರು. ಕುಪ್ಪಂಡ ದಿಲನ್, ಕೋಡಿಮಣಿಯಂಡ ಅಪ್ಪಣ್ಣ, ಅಪ್ಪಚೆಟ್ಟೋಳಂಡ ಅಯ್ಯಪ್ಪ ಮತ್ತು ಕಾಳಿಮಾಡ ಕಿರಣ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಮೂಕಚಂಡ ಬೊಳ್ಳಮ್ಮ ವೀಕ್ಷಕ ವಿವರಣೆಯನ್ನು ನೀಡಿದರು.
ಸಮಾರೋಪ ಸಮಾರಂಭ : ಪೊನ್ನಂಪೇಟೆ ಹಾಕಿ ಟರ್ಫ ಮೈದಾನದಲ್ಲಿ ನಡೆದ ಎರಡು ದಿನಗಳ ಅಂತರ್ ಕಾಲೇಜು ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಂತರ್ ರಾಷ್ಟ್ರೀಯ ರಗ್ಬಿ ಪಟು ಮತ್ತು ಪ್ರಗತಿ ಆಂಗ್ಲ ಮಾದ್ಯಮ ಶಾಲೆಯ ಆಡಳಿತಾಧಿಕಾರಿ ಮಾದಂದ ತಿಮ್ಮಯ್ಯ
ಕ್ರೀಡೆಯಲ್ಲಿ ಸೋಲು-ಗೆಲುವು ಎರಡು ಕಣ್ಣುಗಳಂತೆ. ಆದರೆ ಭಾಗವಹಿಸಿದೆ ಎಂಬ ಮನೋಭಾವ ಕ್ರೀಡಾ ಪಟುವಿನ ಮನದಲ್ಲಿರಬೇಕು ಎಂದು ಸಲಹೆ ನೀಡಿದರು.
ಸಂತ ಅನ್ನಮ್ಮ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆಯು ಶೈಕ್ಷಣಿಕ ಮತ್ತು ಕ್ರೀಡೆಗೆ ಸಮಾನ ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ಬಿ.ಬಿ.ಎ ವಿಭಾಗ ಅಂತರ್ ಕಾಲೇಜು ಹಾಕಿ ಕ್ರೀಡಾಕೂಟವನ್ನು ಹಮ್ಮಿಕೊಂಡಿದೆ. ಅಂತರ್ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಸಾಮರಸ್ಯ ಮೂಡಬೇಕು ಅಲ್ಲದೆ ಪರಸ್ಪರ ಬೇರೆತು ಸ್ನೇಹ ವಿನಿಮಯ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ವ್ಯವಸ್ಥಾಪಕರಾದ ರೆ.ಫಾ. ಮೊದಲೈ ಮುತ್ತು, ಕ್ರೀಡೆಗಳು ಸಾಮರಸ್ಯದ ಸಂಕೇತವಾಗಿದೆ. ಸಮಾನ ವಯಸ್ಕರ ಸಮಾನ ಮನೋಭಾವದ ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸಬೇಕಾಗಿದೆ. ಕ್ರೀಡೆಗಳಲ್ಲಿ ಸಾಧನೆಗೈದು ದೇಶಕ್ಕೆ ಹಾಗೂ ನಾಡಿಗೆ ಕೀರ್ತಿ ತರುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪಂದ್ಯಾವಳಿಯ ಆಯೋಜಕರು ಮತ್ತು ಬಿ.ಬಿ.ಎ ವಿಭಾಗ ಮುಖ್ಯಸ್ಥೆ ಬಿ.ಡಿ.ಹೇಮಾ, ದೈಹಿಕ ಶಿಕ್ಷಣ ನಿರ್ದೇಶಕರಾದ ಬಿ.ವಿ.ರಾಜ ರೈ, ಕ್ರೀಡಾ ನಾಯಕ ಧನಿಶ್ ಹಾಜರಿದ್ದರು. ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕರಾದ ದೃಶ್ಯ ಸ್ವಾಗತಿಸಿದರು. ಉಪನ್ಯಾಸಕರಾದ ದೇಚಮ್ಮ ವಂದಿಸಿದರು.
ವರದಿ : ಟಿ.ಜಿ.ಕಿಶೋರ್ ಕುಮಾರ್ ಶೆಟ್ಟಿ