ಮಡಿಕೇರಿ ಮೇ 25 NEWS DESK : ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್ ಹಾಗೂ ಎಸ್.ಎಸ್.ಎಫ್ ಸಂಘಟನೆಗಳ ಸಹಯೋಗದಲ್ಲಿ ಬಡಹೆಣ್ಣು ಮಗಳ ವಿವಾಹಕ್ಕೆ ಸಹಾಯ ಹಸ್ತಾಂತರ ಹಾಗೂ ಮಾಸಿಕ ಮಹಳರತುಲ್ ಬದ್ರಿಯ ಸಮಾರಂಭ ನಡೆಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಕೂರ್ಗ್ ಜಂಇಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸೈಖುನಾ ಅಶ್ರಫ್ ಅಹ್ಸನಿ ಉಸ್ತಾದ್, ಇಸ್ಲಾಂ ಸರಳ ವಿವಾಹವನ್ನು ಪ್ರೋತ್ಸಾಹಿಸುತ್ತದೆ. ವರದಕ್ಷಿಣೆ ಎನ್ನುವುದು ಇಸ್ಲಾಂಮಿನ ಆಚಾರವಲ್ಲ. ವಧುದಕ್ಷಿಣೆ ಅಥವಾ ಮಹರ್ ನೀಡಿ ಮದುವೆಯಾಗುವುದಾಗಿದೆ ಇಸ್ಲಾಂಮಿನ ಪದ್ದತಿ. ಆದರೆ ಶ್ರೀಮಂತ ಹೆಣ್ಣುಮಕ್ಕಳು ಯತೇಚ್ಚ ಆಭರಣಗಳನ್ನು ಹೊಂದಿ ಮದುವೆಯಾಗುವಾಗ ಬಡ ಹೆಣ್ಣು ಮಕ್ಕಳಿಗೆ ಅಲ್ಪ ಪ್ರಮಾಣದ ಆಭರಣಗಳನ್ನಾದರು ನೀಡುವುದರೊಂದಿಗೆ ಅವರ ಕಣ್ಣೀರು ಒರೆಸುವ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.
ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಮಾತನಾಡಿ, ಮದುವೆ ಎನ್ನುವುದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ರವರ ಚರ್ಯೆಯಾಗಿದೆ. ಪ್ರವಾದಿ ವರ್ಯರ ಕಾಲದಲ್ಲಿ ಸರಳವಾಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ವಿವಾಹ ಸಮಾರಂಭವನ್ನು ಆಡಂಬರದಿಂದ ಆಚರಿಸಲಾಗುತ್ತಿದ್ದು, ಬಹಳ ದುಂದುವೆಚ್ಚ ಮಾಡಲಾಗುತ್ತಿದೆ. ಕೆಲವು ಮುಸ್ಲಿಂ ಮದುವೆಗಳಲ್ಲಿ ಅನಾಚಾರಗಳು ನುಸುಳುತ್ತಿರುವುದು ಖಂಡನೀಯ ಎಂದರಲ್ಲದೆ, ಮುಸ್ಲಿಂ ಜಮಾಅತ್, ಎಸ್.ವೈ.ಎಸ್ಹಾಗೂ ಎಸ್.ಎಸ್.ಎಫ್. ಸಂಘಟನೆಗಳು ಮಾಡುತ್ತಿರುವ ಸಮಾಜಮುಖಿ ಕೆಲಸಗಳ ಬಗ್ಗೆ ಪ್ರಸಂಸೆ ವ್ಯಕ್ತಪಡಿಸಿದರು.
ಪೊನ್ನತ್ ಮೊಟ್ಟೆ ಮುಸ್ಲಿಂ ಜಮಾಅತ್ ಶಾಖಾ ಅಧ್ಯಕ್ಷ ಎಸ್.ಎಂ.ಆಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಕಾರ್ಯದರ್ಶಿ ಅಹಮ್ಮದ್ ಹಾಜಿ, ಮುಸ್ತಫ ಸಖಾಫಿ,ಎಸ್.ವೈ.ಎಸ್.ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್ ಕೊಳಕೇರಿ, ಪ್ರಮುಖರಾದ ಅಬ್ದುಲ್ಲ ಸಖಾಫಿ ಮೊದಲಾವರು ಕಾರ್ಯಕ್ರಮಕ್ಕೆ ಶುಭಕೋರಿದರು.
ವೇದಿಕೆಯಲ್ಲಿ ಸ್ಥಳೀಯ ಖತೀಬ್ ಸಾದುಲಿ ಸಖಾಫಿ, ಎಸ್.ವೈ.ಎಸ್.ಜಲ್ಲಾಕಾರ್ಯದರ್ಶಿ ಅಹ್ಮದ್ ಮದನಿ, ಎಸ್.ಎಸ್.ಎಫ್.ಜಿಲ್ಲಾಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಎಸ್.ವೈ.ಎಸ್.ಜಿಲ್ಲಾಕೋಶಾಧಿಕಾರಿ ಅಬ್ದುಲ್ಲ, ಅಬ್ದುಲ್ಲ ಸಖಾಫಿ, ಹಂಸ ನೆಲ್ಯಹುದಿಕೇರಿ ಯಾಕೂಬ್ ಮಾಸ್ಟರ್, ಹಂಸಮಾಣಿ ಜಮಾಅತ್ ಅಧ್ಯಕ್ಷರಾದ ಉಬೈದುಲ್ಲಾ ಮೌಲವಿ , ಉಧ್ಯಮಿ ಖಾಸೀಮ್ ಕುಶಾಲನಗರ ಹಾಜರಿದ್ದರು.
ಮುಸ್ಲಿಂ ಜಮಾಅತ್ ಸೋಮವಾರಪೇಟೆ ವಲಯ ಅಧ್ಯಕ್ಷ ವಿ.ಪಿ.ಮೌಯ್ದೀನ್ ಪೊನ್ನತ್ ಮೊಟ್ಟೆ ಸ್ವಾಗತಿಸಿದರು. ಸಲಾಂ ಮದನಿ ವಂದಿಸಿದರು.