ಮಡಿಕೇರಿ ಮೇ 25 NEWS DESK : ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿಯ ಕುಂಬಾರಗಡಿಗೆಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿನಿ ಮೀನಾ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಗರ್ವಾಲೆ ಕೊಡವ ಸಮಾಜ ಮತ್ತು ಬೆಂಗಳೂರಿನ ಏಳ್‌ನಾಡ್ ಕೊಡವ ಸಂಘಗಳು ಒತ್ತಾಯಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏಳ್‌ನಾಡ್ ಕೊಡವ ಸಂಘದ ಅಧ್ಯಕ್ಷ ಮಂಡೀರ ಬೋಪಯ್ಯ, ವಿದ್ಯಾರ್ಥಿನಿ ಮೀನಾಳ ಹತ್ಯೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರಿಂದ ಸೂಕ್ತ ರೀತಿಯಲ್ಲಿ ತನಿಖೆ ನಡೆಯುತ್ತಿಲ್ಲವೆಂದು ಆರೋಪಿಸಿದರು.
ಗರ್ವಾಲೆ ಕೊಡವ ಸಮಾಜದ ನಿರ್ದೇಶಕ ಸರ್ಕಂಡ ಸೋಮಯ್ಯ ಮಾತನಾಡಿ, ವಿದ್ಯಾರ್ಥಿನಿಯ ಕುತ್ತಿಗೆ ಕಡಿದು ಹತ್ಯೆ ಮಾಡಿರುವ ಘಟನೆ ಇಡೀ ಮನುಕುಲವೆ ತಲೆ ತಗ್ಗಿಸುವ ಕೃತ್ಯವಾಗಿದೆ. ಪೊಲೀಸರಿಂದ ಘಟನೆ ಕುರಿತು ನಡೆದ ತನಿಖೆ ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. ದುಷ್ಕೃತ್ಯಕ್ಕೆ ಬಳಸಿದ ಮಾರಕಾಯುಧ ಸಿಕ್ಕಿದ ಸ್ವಲ್ಪ ದೂರದಲ್ಲಿಯೇ ಮೀನಾಳ ರುಂಡವಿದ್ದರು ಅದನ್ನು ಪತ್ತೆ ಮಾಡಲು ಯಾಕೆ ಸಾಧ್ಯವಾಗಿಲ್ಲವೆಂದು ಪ್ರಶ್ನಿಸಿದರು.
ದುಷ್ಕೃತ್ಯವೆಸಗಿದ ಆರೋಪಿಯೊಂದಿಗೆ ಇದ್ದ ವ್ಯಕ್ತಿ ಇಂದಿಗೂ ಸೂಕ್ತ ವಿಚಾರಣೆಯಿಲ್ಲದೆ ಹೊರಗಿದ್ದಾನೆ ಎಂದು ಆರೋಪಿಸಿದ ಅವರು, ಸೂಕ್ತ ವಿಚಾರಣೆ ಮತ್ತು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಗರ್ವಾಲೆ ಕೊಡವ ಸಮಾಜ ಮತ್ತು ಬೆಂಗಳೂರಿನ ಏಳ್ ನಾಡ್ ಕೊಡವ ಸಂಘಕ್ಕೆ ಯಾರ ವಿರುದ್ಧವೂ ವೈಯಕ್ತಿಕ ದ್ವೇಷ ಅಥವಾ ಯಾವುದೇ ಲಾಭದ ಆಶಯಗಳಿಲ್ಲ. ಅಮಾಯಕ ಬಾಲಕಿಯ ಹತ್ಯಾ ಪ್ರಕರಣದಲ್ಲಿ ಈ ನೆಲದ ಕಾನೂನು ತನ್ನ ಕೆಲಸವನ್ನು ಮಾಡಿಯೇ ತೀರುತ್ತದೆ ಎನ್ನುವ ನಂಬಿಕೆ ನಮ್ಮದಾಗಿದೆ. ಮುಂದೆಂದೂ ಇಂತಹ ಘಟನೆ ನಡೆಯಬಾರದು ಎಂದ ಸೋಮಯ್ಯ, ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗಳು, ಜಿಲ್ಲೆಯ ಇಬ್ಬರು ಶಾಸಕರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗರ್ವಾಲೆ ಕೊಡವ ಸಮಾಜದ ಕಾರ್ಯದರ್ಶಿ ತಾಚಮಂಡ ಈರಪ್ಪ, ಏಳ್‌ನಾಡ್ ಕೊಡವ ಸಂಘದ ಉಪಾಧ್ಯಕ್ಷ ಐಮುಡಿಯಂಡ ಭೀಮಯ್ಯ, ಖಜಾಂಚಿ ಕನ್ನಿಕಂಡ ದೇವಯ್ಯ ಹಾಗೂ ಸಹ ಕಾರ್ಯದರ್ಶಿ ಗೌಡಂಡ ಕುಂಞಪ್ಪ ಉಪಸ್ಥಿತರಿದ್ದರು.