ಮಡಿಕೇರಿ ಮೇ 26 NEWS DESK : ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಮೈತ್ರಿ ಕೂಟದ ಅಭ್ಯರ್ಥಿಗಳಾದ ಡಾ.ಧನಂಜಯ ಸರ್ಜಿ ಹಾಗೂ ಎಸ್.ಎಲ್.ಬೋಜೆಗೌಡ ಅವರುಗಳ ಗೆಲುವು ನಿಶ್ಚಿತವೆಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಪ್ರಜ್ಞಾವಂತ ಮತದಾರರು ಬಿಜೆಪಿಯ ಇಬ್ಬರು ಸಮರ್ಥ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ವತಿಯಿಂದ ಕೊಡಗಿನ ಪ್ರತಿ ಮಂಡಲ ವ್ಯಾಪ್ತಿಯ ಮತದಾರರನ್ನು ಭೇಟಿಯಾಗಿ ಧನಂಜಯ ಸರ್ಜಿ ಹಾಗೂ ಬೋಜೆಗೌಡರನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ವಿದ್ಯಾವಂತ ಮತದಾರರಿಂದ ಉತ್ತಮ ಸ್ಪಂದನೆ ದೊರೆತ್ತಿದ್ದು, ಇಬ್ಬರ ಗೆಲುವು ಕೂಡ ಸುಲಭವಾಗಲಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಪ್ರತಿ ಸಮಸ್ಯೆಗಳ ಬಗ್ಗೆ ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ತಿಳಿದುಕೊಂಡಿದ್ದಾರೆ. ಗೆದ್ದ ನಂತರ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಶ್ರಮಿಸಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.
ಡಾ.ಧನಂಜಯ ಸರ್ಜಿ ಹಾಗೂ ಎಸ್.ಎಲ್.ಬೋಜೆಗೌಡ ಅವರುಗಳು ಮತದಾರರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲು ಮೇ 28 ರಂದು ಕೊಡಗು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಸುಬ್ರಮಣ್ಯ ಉಪಾಧ್ಯಾಯ ಕಾರ್ಯಕ್ರಮದ ವಿವರ ನೀಡಿದ್ದಾರೆ.
ಅಂದು ಬೆಳಿಗ್ಗೆ 8.30 ಗಂಟೆಗೆ ಮಡಿಕೇರಿ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸಂತ ಮೈಕಲರ ಶಾಲೆ, ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮತ್ತು ಸಂತ ಜೋಸೆಫರ ಶಾಲೆಗೆ ಭೇಟಿ ನೀಡಲಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ನಂತರ 10.30 ಗಂಟೆಗೆ ಮತದಾರರ ಹಾಗೂ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.
ಮಧ್ಯಾಹ್ನ 12.30 ಗಂಟೆಗೆ ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠ ಮತ್ತು ಶಾಲೆಗೆ ಭೇಟಿ, 1.30ಕ್ಕೆ ಗೋಣಿಕೊಪ್ಪದ ಕಾಲ್ಸ್ ಶಾಲೆ, 1.45 ಕಾವೇರಿ ಕಾಲೇಜು ಭೇಟಿ ಮತ್ತು 2 ಗಂಟೆಗೆ ದುರ್ಗಾ ಬೋಜಿ ಹಾಲ್ ನಲ್ಲಿ ಮತದಾರರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಸೋಮವಾರಪೇಟೆಯ ಅನುಗ್ರಹ ಪಿ.ಯು ಕಾಲೇಜು, 3.30ಕ್ಕೆ ವಿಶ್ವ ಮಾನವ ಕುವೆಂಪು ಶಾಲೆ ಭೇಟಿ ಮತ್ತು ಸಂಜೆ 4 ಗಂಟೆಗೆ ಸೋಮವಾರಪೇಟೆ ಕೊಡವ ಸಮಾಜದಲ್ಲಿ ಮತದಾರರ ಹಾಗೂ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ನಂತರ 5.30 ಗಂಟೆಗೆ ಕುಶಾಲನಗರದ ಮಹಾಲಕ್ಷ್ಮಿ ಹಾಲ್ ನಲ್ಲಿ ನಡೆಯುವ ಮತದಾರರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸುಬ್ರಮಣ್ಯ ಉಪಾಧ್ಯಾಯ ತಿಳಿಸಿದ್ದಾರೆ.