ಕಡಂಗ ಮೇ 28 NEWS DESK : ವಿರಾಜಪೇಟೆಯಿಂದ ನಾಪೋಕ್ಲುವಿಗೆ ತೆರಳುವ ಹಾಗೂ ಕಡಂಗ ಮತ್ತು ಕಾಕೋಟುಪರಂಬುವಿಗೆ ಸಂಪರ್ಕ ಕಲ್ಪಿಸುವ ಕುಂಜಲಗೇರಿ ರಸ್ತೆ ಸಂಪೂರ್ಣವಾಗಿ ಹದಗಿಟ್ಟಿದ್ದು, ಪಾದಾಚಾರಿಗಳು ಹಾಗೂ ವಾಹನ ಚಾಲಕರ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಕೋಟುಪರಂಬು ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಕುಂಜಿಲಗೇರಿ ಗ್ರಾಮದ ರಸ್ತೆಯು ಕಳೆದ 15 ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟಿದ್ದು, ಗ್ರಾಮಸ್ಥರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಹಲವು ವರ್ಷಗಳಿಂದ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಶಾಸಕರು, ಸಂಸದರು, ಪರಿಷತ್ ಸದಸ್ಯರು ಹಾಗೂ ಜಿಲ್ಲಾ ಪಂಚಾಯ್ತಿ ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಮನವಿ ಸಲ್ಲಿಸಲಾಗಿದ್ದು, ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಕಡಂಗ, ಪಾರಣೆ ಮುಖ್ಯ ರಸ್ತೆಯಲ್ಲಿ ಹೋಗುವಾಗ ಕುಂಜಲಗೇರಿಯ ವಲ್ಲಂಡ ಕೊಟ್ಟ್ ಎಂಬಲ್ಲಿ ಮುಖ್ಯ ರಸ್ತೆಯು ಸಹ ಈ ರಸ್ತೆಯಿಂದ ಮಳೆಗಾಲದಲ್ಲಿ ಬರುವ ಕೆಸರಿನಿಂದ ದುಸ್ಥಿತಿಯಲ್ಲಿದ್ದು, ರಸ್ತೆ ದುರಸ್ತಿ ಆಗ್ರಹಿಸಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೆ ಕೇವಲ ಭರವಸೆಗಳಷ್ಟೇ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರಾದ ಗಿರೀಶ್ ರೈ ಬೇಸರ ವ್ಯಕ್ತಪಡಿಸಿದರು.
ವರದಿ : ನೌಫಲ್ ಕಡಂಗ