ಮಡಿಕೇರಿ ಮೇ 28 NEWS DESK : ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಜನಪರ ಚಳುವಳಿಗಳ ಒಕ್ಕೂಟ ಮೇ 30 ರಂದು ಹಮ್ಮಿಕೊಂಡಿರುವ “ನಮ್ಮೆಲ್ಲರ ಹೋರಾಟದ ನಡಿಗೆ ಹಾಸನದ ಕಡೆಗೆ” ಬೃಹತ್ ಪ್ರತಿಭಟನಾ ಮೆರವಣಿಗೆಗೆ ಕೊಡಗು ಜಿಲ್ಲಾ ಸಿಐಟಿಯು ಸಂಘಟನೆ ಬೆಂಬಲ ನೀಡಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಜ್ವಲ್ ರೇವಣ್ಣ ನಡೆಸಿದ್ದಾರೆ ಎನ್ನಲಾಗಿರುವ ಮಹಿಳಾ ದೌರ್ಜನ್ಯದಿಂದ ಇಡೀ ದೇಶ ತಲೆ ತಗ್ಗಿಸುವಂತ್ತಾಗಿದೆ. ಮಹಿಳೆಯರಿಗೆ ರಕ್ಷಣೆ ನೀಡಬೇಕಾದ ಜನಪ್ರತಿನಿಧಿಯೇ ದೌರ್ಜನ್ಯ ನಡೆಸಿರುವುದು ಅತ್ಯಂತ ಹೇಯ ಕೃತ್ಯವೆಂದು ಆರೋಪಿಸಿದರು.
ಆದಿವಾಸಿಗಳು, ಅಮಾಯಕರು ಯಾವುದೇ ದೊಡ್ಡ ತಪ್ಪು ಮಾಡದಿದ್ದರೂ ತಕ್ಷಣ ಬಂಧಿಸುವ ಆಡಳಿತ ವ್ಯವಸ್ಥೆ ಪ್ರಜ್ವಲ್ ಅವರ ವಿರುದ್ಧ ಗಂಭೀರ ಆರೋಪಗಳಿದ್ದರೂ ವಿದೇಶಕ್ಕೆ ಪಲಾಯನ ಮಾಡಲು ಅವಕಾಶ ನೀಡಿದೆ. ಎಲ್ಲೋ ಕುಳಿತು ರಾಜಾರೋಷವಾಗಿ ವಿಡಿಯೋ ಮಾಡಿ ಮೇ 31 ಕ್ಕೆ ಬರುವುದಾಗಿ ಹೇಳಿಕೆ ನೀಡುತ್ತಿರುವ ಪ್ರಜ್ವಲ್ ಅವರಿಗೆ ಕಾನೂನಿನ ಬಗ್ಗೆ ಭಯ ಅಥವಾ ಗೌರವವಿಲ್ಲವೇ ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಪಾಳೇಗಾರಿಕೆ, ಮಿತಿ ಮೀರಿದ ಆದಾಯ ಗಳಿಕೆ ಮತ್ತು ಕುಟುಂಬ ರಾಜಕಾರಣದ ದರ್ಪ ಮುಂದುರೆದಿದೆ. ರಾಜಕೀಯ ಪ್ರಭಾವ ಹಾಗೂ ಹಣಬಲ ಪ್ರಜ್ವಲ್ ರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು.
ಗಂಭೀರ ಆರೋಪ ಎದುರಿಸುತ್ತಿರುವ ಪ್ರಜ್ವಲ್ ಅವರು ಪ್ರತಿನಿಧಿಸುವ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲವೆಂದು ಪಿ.ಆರ್.ಭರತ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜ್ವಲ್ ರನ್ನು ತಕ್ಷಣ ಬಂಧಿಸಬೇಕೆಂದು ಸ್ವತ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯಬೇಕು ಮತ್ತು ದೌರ್ಜನ್ಯಕ್ಕೊಳಗಾದ ಅಮಾಯಕ ಮಹಿಳೆಯರ ವಿಡಿಯೋಗಳನ್ನು ವೈರಲ್ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ ಪ್ರಜ್ವಲ್ ರನ್ನು ಬಂಧಿಸುವಂತೆ ಒತ್ತಾಯಿಸಿ ಮೇ 30 ರಂದು ಹಾಸನದ ಹೇಮಾವತಿ ಪ್ರತಿಮೆ ಬಳಿಯಿಂದ ಹೊಸ ಬಸ್ ನಿಲ್ದಾಣ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಸಿಐಟಿಯು ಸಂಘಟನೆಯ ಕೊಡಗು ಜಿಲ್ಲಾ ಘಟಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಎನ್.ಡಿ.ಕುಟ್ಟಪ್ಪ ಉಪಸ್ಥಿತರಿದ್ದರು.