ಮಡಿಕೇರಿ ಮೇ 31 NEWS DESK : ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಮತ್ತು ಕರಿಮೆಣಸು ಬೆಳೆಗೆ ವಿಮೆ ಪಾವತಿ ಮಾಡಿದ್ದರೂ ವಿಮಾ ಸಂಸ್ಥೆ ಬೆಳೆಗಾರರ ಖಾತೆಗೆ ವಿಮಾ ಮೊತ್ತವನ್ನು ಪಾವತಿ ಮಾಡುತ್ತಿಲ್ಲವೆಂದು ಆರೋಪಿಸಿ ಮಡಿಕೇರಿ ತಾಲ್ಲೂಕು ಮೂರ್ನಾಡುವಿನ ಮುತ್ತಾರ್ಮುಡಿ ಕುಂಬಳದಾಳು ಗ್ರಾಮದ ಬೆಳೆಗಾರರು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ದೂರು ನೀಡಿದ್ದಾರೆ.
ಬೆಳೆಗಾರರ ಪರವಾಗಿ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಬೆಳೆಗಾರರಾದ ತೆಕ್ಕಡೆ ಆರ್.ಸುನಂದ ಹಾಗೂ ದೇವಜನ ಕೆ.ಉತ್ತಯ್ಯ ಅವರು ವಿಮಾ ಸಂಸ್ಥೆಯಿಂದ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
2023-24ನೇ ಸಾಲಿನಲ್ಲಿ ಬ್ಯಾಂಕ್ ಖಾತೆಯಿಂದ ಅಡಿಕೆ ಮತ್ತು ಕರಿಮೆಣಸು ಬೆಳೆಗೆ ವಿಮಾ ಸಂಸ್ಥೆಗೆ ಪ್ರೀಮಿಯಂ ಮೊತ್ತವನ್ನು ಪಾವತಿಸಲಾಗಿದೆ. ಇದೇ ಸಾಲಿನಲ್ಲಿ ಮಡಿಕೇರಿ ತಾಲ್ಲೂಕು ಸೇರಿದಂತೆ ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಸರಕಾರವೇ ಘೋಷಣೆ ಮಾಡಿದೆ. ಕಳೆದ ಸಾಲಿನ ಮಳೆಗಾಲದಲ್ಲಿ ಮಳೆ ಬಾರದೆ ಅಡಿಕೆ ಮತ್ತು ಕರಿಮೆಣಸು ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಸಕಾಲದಲ್ಲಿ ಬೆಳೆ ಸರಿಯಾಗಿ ಕೈಗೆ ಬಾರದೆ ಬ್ಯಾಂಕ್ ಸಾಲಕ್ಕೆ ಬಡ್ಡಿ, ಅಸಲು ಕಟ್ಟಲಾಗದೆ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಆದರೂ ಕರುಣೆ ತೋರದ ವಿಮಾ ಸಂಸ್ಥೆ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ವಿಮಾ ಮೊತ್ತವನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಸರಕಾರ ಹಾಗೂ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ವಿಮಾ ಮೊತ್ತ ಬಿಡುಗಡೆಗೊಳಿಸಿ ಕೊಡಬೇಕು ಎಂದು ಮನವಿ ಮಾಡಿದರು.
::: ಕಾನೂನು ಹೋರಾಟ :::
ಇದೀಗ 2024-25 ನೇ ಸಾಲಿನ ವಿಮಾ ಪ್ರೀಮಿಯಂ ಮೊತ್ತವನ್ನು ಸಂಗ್ರಹಿಸಲು ವಿಮಾ ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಬೆಳೆಗಾರರು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದ ತೆಕ್ಕಡೆ ಆರ್.ಸುನಂದ, ವಿಮಾ ಸಂಸ್ಥೆಯ ವಿರುದ್ಧ ನಡೆಸುವ ಕಾನೂನು ಹೋರಾಟಕ್ಕೆ ಎಲ್ಲಾ ಬೆಳೆಗಾರರು ಸಹಕಾರ ನೀಡಬೇಕೆಂದು ಕೋರಿದರು. ಹೋರಾಟದ ಕುರಿತು ಹೆಚ್ಚಿನ ಮಾಹಿತಿಗೆ ಮೊ.ಸಂ. 7760387779 ನ್ನು ಸಂಪರ್ಕಿಸುವಂತೆ ತಿಳಿಸಿದರು.