ಕುಶಾಲನಗರ ಮೇ 31 NEWS DESK : ಉತ್ತರ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವದಲ್ಲಿ ಉಭಯ ಶಾಲೆಗಳ ಮಕ್ಕಳು ವಿನೂತನ ರೀತಿಯಲ್ಲಿ ಶಾಲೆಗೆ ಆಗಮಿಸಿದ್ದು, ಗ್ರಾಮಸ್ಥರು ಗಮನ ಸೆಳೆಯಿತು.
ಗ್ರಾಮಸ್ಥರು ಮಕ್ಕಳ ಸಂಭ್ರಮಕ್ಕೆ ಸಾಕ್ಷಿಯಾದರು. ಶಾಲಾ ಪ್ರಾರಂಭೋತ್ಸವದ ಮೊದಲ ದಿನ ಕೂಡ್ಲೂರು ಗ್ರಾಮದಲ್ಲಿ ಉಭಯ ಶಾಲೆಯ ವತಿಯಿಂದ ಜಂಟಿಯಾಗಿ ಏರ್ಪಡಿಸಿದ್ದ ಎತ್ತಿನ ಗಾಡಿಯ ಮೆರವಣಿಗೆ ಮೂಲಕ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಿಕ್ಷಕರು ಹೂವು ಹಾಗೂ ಸಿಹಿ ವಿತರಿಸಿ ಸ್ವಾಗತಿಸಿ ಶಾಲೆಗೆ ಬರಮಾಡಿಕೊಂಡರು.
ಜಾನಪದ ಸಂಸ್ಕೃತಿಯ ಪ್ರತೀಕವಾದ ಎತ್ತಿನ ಗಾಡಿಯನ್ನು ಏರಿದ ಮಕ್ಕಳು ಸರ್ಕಾರಿ ಶಾಲೆಗೆ ಹೋಗೋಣ ಬನ್ನಿ, ಸರ್ಕಾರಿ ಶಾಲೆ ನಮ್ಮ ಹೆಮ್ಮೆ, ಸರ್ಕಾರಿ ಶಾಲೆ ನಮ್ಮೂರ ಶಾಲೆ, ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸೋಣ ಬನ್ನಿ, ‘ಶಿಕ್ಷಣವೇ ಶಕ್ತಿ’ ಎಂಬಿತ್ಯಾದಿ ಘೋಷಣೆಗಳ ಫಲಕಗಳನ್ನು ಹಿಡಿದು ಎತ್ತಿನ ಗಾಡಿಯ ಮೂಲಕ ಸಂಭ್ರಮದಿಂದ ಶಾಲೆಗೆ ಆಗಮಿಸಿದರು.
ಗ್ರಾಮದ ಬಸವೇಶ್ವರ ದೇವಸ್ಥಾನ ಬಳಿಯ ಮುಖ್ಯರಸ್ತೆ ಬಳಿಯಿಂದ ಆರಂಭಗೊಂಡ ಮಕ್ಕಳ ಎತ್ತಿನ ಗಾಡಿಗೆ ಚಾಲನೆ ನೀಡಿದ ಗ್ರಾಮದ ಹಿರಿಯ ನಾಗರಿಕರು ಹಾಗೂ ಕೃಷಿಕ ಕೆ.ಎಸ್.ರಾಜಾಚಾರಿ, ಪೋಷಕರು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.
ಮಕ್ಕಳು ಏರಿದ ಅಲಂಕೃತ ಎತ್ತಿನ ಗಾಡಿಯನ್ನು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮುನ್ನಡೆಸಿದರು. ಗ್ರಾಮದ ಕೃಷಿಕ ಕೆ.ಆರ್.ನಾಗರಾಜ್ ಅವರ ಎತ್ತಿನ ಗಾಡಿಯಲ್ಲಿ ಸಾಗಿದ ಮಕ್ಕಳಿಗೆ ದಾರಿಮಧ್ಯೆ ಮಹಿಳೆಯರು ಆರತಿ ಬೆಳಗಿಸಿ ಸ್ವಾಗತಿಸಿದರು.
ಎತ್ತಿನ ಗಾಡಿಯಲ್ಲಿ ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷಕಿಯರು ಸಾಂಪ್ರದಾಯಿಕ ಆರತಿ ಬೆಳಗಿಸಿದರು. ಪ್ರೌಢಶಾಲಾ ಅಂಗಳಕ್ಕೆ ಎತ್ತಿನ ಗಾಡಿಯ ಮೂಲಕ ಆಗಮಿಸಿದ ಮಕ್ಕಳಿಗೆ ಶಿಕ್ಷಕ ವೃಂದ ಹೂವು, ಸಿಹಿ ಹಾಗೂ ಪುಸ್ತಕ ನೀಡುವ ಮೂಲಕ ಸ್ವಾಗತಿಸಿದರು.
ಪ್ರಸಕ್ತ ಸಾಲಿನ ಶಿಕ್ಷಣ ಇಲಾಖೆಯ ಧ್ಯೇಯವಾಕ್ಯ “ಶೈಕ್ಷಣಿಕ ಬಲವರ್ಧನೆ” ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಸರ್ಕಾರ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಸೌಲಭ್ಯದೊಂದಿಗೆ ವಿವಿಧ ಸವಲತ್ತುಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಮನವಿ ಮಾಡಿದರು.
ಪಠ್ಯ ಪುಸ್ತಕ ವಿತರಣೆಗೆ ಚಾಲನೆ ನೀಡಿದ ಜಾನಪದ ಕಲಾವಿದ ಭರಮಣ್ಣ ಬೆಟ್ಟಗೇರಿ, ಗ್ರಾಮಾಂತರ ಪ್ರದೇಶದ ಈ ಸರ್ಕಾರಿ ಪ್ರೌಢಶಾಲೆಗೆ ಕಳೆದ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬಂದಿದ್ದು, ಮಕ್ಕಳು ಉತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ ಎಂದ ಅವರು, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು, ಎತ್ತಿನ ಗಾಡಿಯ ಮೂಲಕ ಮಕ್ಕಳನ್ನು ಶಾಲೆಗೆ ಕರೆತಂದ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ವಿಶೇಷ ಕಾಳಜಿಯು ಅನುಕರಣೀಯವಾದುದು ಎಂದರು.
ಎಸ್‍ಡಿಎಂಸಿ ಮಾಜಿ ಸದಸ್ಯ ಎಂ.ನಾಗರಾಜ್ ಹಾಗೂ ದಾನಿ ಕೆ.ಎನ್.ಸೋಮಶೇಖರ್ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದರು.
ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಎನ್.ಸುಜಾತ, ಬಿ.ಡಿ.ರಮ್ಯ, ಎಸ್.ಎಂ.ಗೀತಾ, ಬಿ.ಎಸ್.ಅನ್ಸಿಲಾ, ರೇಖಾ, ಕೆ.ಟಿ.ಸೌಮ್ಯ, ಪೋಷಕರು ಇದ್ದರು.
ಮಕ್ಕಳಿಗೆ ಸಿಹಿ ವಿತರಣೆ : ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ಸಿಹಿಯೊಂದಿಗೆ ಬಿಸಿಯೂಟ ವಿತರಿಸಲಾಯಿತು. ಮಕ್ಕಳು ಶಾಲಾ ಪ್ರಾರಂಭೋತ್ಸವದಲ್ಲಿ ಸಂಭ್ರಮಿಸಿದರು. ಸಮುದಾಯ ಭಾಗವಹಿಸುವಿಕೆ ಎತ್ತಿನ ಗಾಡಿ ಮೆರವಣಿಗೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಗ್ರಾಮದ ಸಮುದಾಯದೊಂದಿಗೆ ಪ್ರೌಢಶಾಲಾ ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಕೆ.ಕೆ.ಭೋಗಪ್ಪ, ಪ್ರಾಥಮಿಕ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಗಿರಿಪ್ರಸಾದ್, ಉಪಾಧ್ಯಕ್ಷೆ ಶಾಹಿದಾ, ಸದಸ್ಯೆ ಸುಮತಿ, ಮುಖ್ಯ ಶಿಕ್ಷಕಿ ಹೆಚ್.ಎಂ.ಸುಜಾತ, ಶಿಕ್ಷಕರು, ವಿದ್ಯಾರ್ಥಿಗಳು, ದೇವಾಲಯ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
Breaking News
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*
- *ಕುಶಾಲನಗರದಲ್ಲಿ ಅಕ್ಷರ ಜ್ಯೋತಿ ಯಾತ್ರೆಗೆ ಸ್ವಾಗತ : ಉತ್ತಮ ಸಂಸ್ಕಾರ, ಸದ್ಗುಣ ಬೆಳೆಸಿಕೊಳ್ಳಲು ಬಸವಕುಮಾರ್ ಪಾಟೀಲ್ ಕರೆ*
- *ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ*