ಮಡಿಕೇರಿ ಜೂ.12 NEWS DESK : ಅವಘಡದಿಂದ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾದ ಆರೋಪದಡಿ ದ್ವಿಚಕ್ರ ವಾಹನವನ್ನು ಚಲಾಯಿಸಿದ್ದ ಅಪ್ರಾಪ್ತ ಬಾಲಕನನ್ನು ನ್ಯಾಯಾಲಯದ ಸೂಚನೆಯಂತೆ ಸುಧಾರಣೆಗಾಗಿ ಮೈಸೂರಿನ ಸರ್ಕಾರಿ ವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ. ವಾಹನದ ಮಾಲೀಕರಾದ ಆತನ ತಾಯಿ ಯಶೋಧ ಎಂಬುವವರ ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ದುಂಡಳ್ಳಿ ಪಂಚಾಯತ್ ರಸ್ತೆಯಲ್ಲಿ ಜೂ.1 ರಂದು ರಾತ್ರಿ ಸುಮಾರು 7.15 ಗಂಟೆಗೆ ಪಾದಾಚಾರಿ ಜಯಪ್ಪ ಎಂಬುವರಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಜೂ.2 ರಂದು ಕೊನೆಯುಸಿರೆಳೆದಿದ್ದರು.
ಘಟನೆಗೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಅಪ್ರಾಪ್ತನಿಂದ ಅಪಘಾತವಾಗಿದೆ ಎಂದು ತಿಳಿದು ಬಂದಿತ್ತು. ಸಕಲೇಶಪುರ ತಾಲ್ಲೂಕು ಚಂಗಡಹಳ್ಳಿ ಗ್ರಾಮದ ನಿವಾಸಿ ಯಶೋಧ ಎಂಬುವವರ ಅಪ್ರಾಪ್ತ ವಯಸ್ಸಿನ ಪುತ್ರ ಸ್ಕೂಟಿಯನ್ನು ಚಲಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ದ್ವಿಚಕ್ರ ವಾಹನದ ಮಾಲೀಕರಾದ ಯಶೋಧ ಹಾಗೂ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಸೋಮವಾರಪೇಟೆಯ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ಅಪ್ರಾಪ್ತ ಬಾಲಕನ ಸುಧಾರಣೆ ಸಲುವಾಗಿ 11 ದಿನಗಳ ಕಾಲ ಮೈಸೂರಿನ ಸರಕಾರಿ ವೀಕ್ಷಣಾಲಯಕ್ಕೆ ಕಳುಹಿಸುವಂತೆ ಈ ಸಂದರ್ಭ ಆದೇಶಿಸಿದೆ.