ಕೂಡಿಗೆ ಜೂ.15 NEWS DESK : ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ದೈಹಿಕ ಶಿಕ್ಷಣ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.) ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಾಲಾ ಘಟಕ, ಹಾಗೂ ರೆಡ್ ರಿಬ್ಬನ್ ಕ್ಲಬ್,
ಘಟಕ ಹಾಗೂ ಭಾರತ್ ಸ್ಕೌಟ್ಸ್ & ಗೈಡ್ಸ್ ಘಟಕದ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂ.21 ರಂದು ನಡೆಯಲಿರುವ ವಿಶ್ವ ಯೋಗೋತ್ಸವ ಪೂರ್ವಭಾವಿಯಾಗಿ ಮಕ್ಕಳ ಯೋಗಾಭ್ಯಾಸಕ್ಕೆ ಚಾಲನೆ ನೀಡಲಾಯಿತು.
ವಿಶ್ವ ಯೋಗದ ದಿನದ ಮಹತ್ವ ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಯೋಗಾಭ್ಯಾಸವು ತುಂಬಾ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ನಿರಂತರವಾಗಿ ಯೋಗಾಭ್ಯಾಸ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಬೆಳಗಿನ ಯೋಗವು ನಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಮೆದುಳನ್ನು ಅಧ್ಯಯನ ಮಾಡಲು ಅಥವಾ ಕೆಲಸ ಮಾಡಲು ಹೆಚ್ಚು ಸಕ್ರಿಯವಾಗಿಸುತ್ತದೆ. ಇದು ಸಂತೋಷ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ನಾವು ಬೆಳಿಗ್ಗಿನ ವೇಳೆಯಲ್ಲಿ ಯೋಗಾಭ್ಯಾಸ ಮಾಡಿದರೆ ನಮ್ಮ ಮನಸ್ಸು ಮತ್ತು ದೇಹವನ್ನು ಶುದ್ಧಗೊಳಿಸುತ್ತದೆ. ಇದು ಇಡೀ ದಿನ ನಮಗೆ ಚೈತನ್ಯವನ್ನು ನೀಡುತ್ತದೆ ಮತ್ತು ನಮ್ಮನ್ನು ಶಿಸ್ತುಬದ್ಧವಾಗಿರಿಸುತ್ತದೆ ಎಂದರು.
ಯೋಗದ ಆಸನಗಳು ಅಥವಾ ಭಂಗಿಗಳನ್ನು ಅಭ್ಯಾಸ ಮಾಡುವುದು ವ್ಯಕ್ತಿಯ ಮನಸ್ಸು, ದೇಹ ಮತ್ತು ಆತ್ಮವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಶಾಂತಿಯುತ ದೇಹ ಮತ್ತು ಮನಸ್ಸನ್ನು ಸಾಧಿಸಲು ದೈಹಿಕ ಮತ್ತು ಮಾನಸಿಕ ಶಿಸ್ತುಗಳನ್ನು ಒಟ್ಟುಗೂಡಿಸುತ್ತದೆ; ಇದು ಮನಸ್ಸಿನ ಒತ್ತಡ ಮತ್ತು ಆತಂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ನಮ್ಮನ್ನು ಆರಾಮವಾಗಿರಿಸುತ್ತದೆ ಎಂದು ಪ್ರೇಮಕುಮಾರ್ ತಿಳಿಸಿದರು.
ಜೂ.21 ರಂದು ವಿಶ್ವ ಯೋಗ ದಿನ: ನಮ್ಮ ಜೀವನದಲ್ಲಿ ಯೋಗಾಸನದ ಮಹತ್ವವನ್ನು ಅರ್ಥೈಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವದಾದ್ಯಂತ ಯೋಗ ದಿನವನ್ನು ಜೂ.21 ರಂದು ಆಚರಿಸಲಾಗುತ್ತದೆ.
ಪ್ರತಿದಿನ ಯೋಗಾಭ್ಯಾಸ ಮಾಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಯೋಗವು ಹಲವಾರು ರೋಗಗಳನ್ನು ನಮ್ಮತ್ತ ಸುಳಿಯದಂತೆ ನೋಡಿಕೊಳ್ಳುತ್ತದೆ. ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವದಾದ್ಯಂತ ಜೂ.21 ರಂದು ಆಚರಿಸಲಾಗುತ್ತದೆ.
ಯೋಗಾಭ್ಯಾಸದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಹಾಗೂ ಯೋಗ ತರಬೇತುದಾರರಾದ ಕೆ.ಟಿ.ಸೌಮ್ಯ, ನಮ್ಮ ಮನಸ್ಸು ಮತ್ತು ದೇಹವನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿ ಇರಿಸಿಕೊಳ್ಳಲು ಸಹಾಯ ಮಾಡುವ ವಿವಿಧ ಯೋಗ ಆಸನಗಳು ಮತ್ತು ಭಂಗಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿದರು. ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡುವ ಮೂಲಕ ಗಮನ ಸೆಳೆದರು.
ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ.ಸೌಮ್ಯ, ವಿದ್ಯಾರ್ಥಿಗಳಿಂದ ವಿವಿಧ ಯೋಗಾಸನ ಭಂಗಿಗಳನ್ನು ಅಭ್ಯಾಸ ಮಾಡಿಸಿದರು.
ಎಸ್.ಡಿ.ಎಂ.ಸಿ ಸದಸ್ಯ ಶ್ರೀನಿವಾಸಚಾರಿ, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಎನ್.ಸುಜಾತ, ಬಿ.ಡಿ.ರಮ್ಯ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಸಿಬ್ಬಂದಿ ಎಂ.ಉಷಾ ಇದ್ದರು. ಶಿಕ್ಷಕರು ಮಕ್ಕಳಿಗೆ ವಿವಿಧ ಯೋಗಗಳ ಭಂಗಿಗಳ ಕುರಿತು ವಿವರಿಸಿದರು.