ಮಡಿಕೇರಿ ಜೂ.15 NEWS DESK : ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವಂತೆ ಪೌರಾಯುಕ್ತರಿಗೆ ಲೋಕಾಯುಕ್ತ ಡಿವೈಎಸ್‍ಪಿ ಪವನ್ ಕುಮಾರ್ ಸೂಚಿಸಿದ್ದಾರೆ.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಬೀದಿ ನಾಯಿಗಳ ಹಾವಳಿ ಜೊತೆಗೆ ಬಿಡಾಡಿ ಜಾನುವಾರುಗಳ ಸಂಖ್ಯೆ ಹೆಚ್ಚಾಗಿದ್ದು, ಜಾನುವಾರುಗಳನ್ನು ಗೋಶಾಲೆಗೆ ಸ್ಥಳಾಂತರಿಸುವುದು ಮತ್ತಿತರ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಡಿವೈಎಸ್‍ಪಿ ನಿರ್ದೇಶನ ನೀಡಿದರು. ನಗರ ಸ್ವಚ್ಚತೆ ಸಂಬಂಧಿಸಿದಂತೆ ಕಸ ವಿಲೇವಾರಿ ಸಮರ್ಪಕ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಈ ಕುರಿತು ಪ್ರತಿಕ್ರಿಯಿಸಿದ ನಗರಸಭೆ ಪೌರಾಯುಕ್ತರು ಬೀದಿನಾಯಿ ಹಾವಳಿ ನಿಯಂತ್ರಣಕ್ಕೆ ನಿಯಮಾನುಸಾರ ಕ್ರಮವಹಿಸಲಾಗಿದೆ. ಕಸ ವಿಲೇವಾರಿ ಸಂಬಂಧ 10 ಎಕರೆ ಜಾಗ ಗುರುತಿಸಲಾಗಿದ್ದು, ಅರಣ್ಯ ಇಲಾಖೆಯಿಂದ ಎನ್‍ಒಸಿ ನೀಡಬೇಕಿದೆ ಎಂದು ಮಾಹಿತಿ ನೀಡಿದರು. ಹೆಬ್ಬೆಟ್ಟಗೇರಿ ಗ್ರಾಮದ ಸಾರ್ವಜನಿಕರೊಬ್ಬರು 2018 ಮತ್ತು 2019 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಳ್ಳಲಾಗಿದ್ದು, ಆದರೆ ಇದುವರೆಗೆ ಮನೆ ಕೊಟ್ಟಿಲ್ಲ ಎಂದು ದೂರಿದರು.
ಈ ಬಗ್ಗೆ ಮಾತನಾಡಿದ ಲೋಕಾಯುಕ್ತ ಡಿವೈಎಸ್‍ಪಿ ಪವನ್ ಕುಮಾರ್ ಅವರು ಉಪ ವಿಭಾಗಾಧಿಕಾರಿ ಅವರನ್ನು ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿದರು. ನೇರವಾಗಿ ಭೇಟಿ ಮಾಡಿ ಆದ್ಯತೆ ಮೇಲೆ ಮನೆ ಕೊಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಲೋಕಾಯುಕ್ತ ಸಂಸ್ಥೆಯು ಅಧಿಕಾರಿಗಳಿಗೆ ತೊಂದರೆ ಕೊಡುವುದಕ್ಕಲ್ಲ, ಒಳ್ಳೆಯ ಕೆಲಸ ಮಾಡುವವರಿಗೆ ಬೆನ್ನು ತಟ್ಟುವ ಕೆಲಸ ಆಗಬೇಕು ಎಂದರು. ಖಾತೆ ಬದಲಾವಣೆ, ರಸ್ತೆ ಸಂಪರ್ಕ ಕಲ್ಪಿಸುವುದು ಮತ್ತಿತರ ಸಂಬಂಧ ಹಲವು ದೂರುಗಳು ಲೋಕಾಯುಕ್ತ ಅಹವಾಲು ಸಭೆಗೆ ಸಲ್ಲಿಕೆಯಾದವು. ತಹಶೀಲ್ದಾರ್ ಪ್ರವೀಣ್ ಕುಮಾರ್, ತಾ.ಪಂ.ಇಒ ಶೇಖರ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.