ಮಡಿಕೇರಿ ಜೂ.16 NEWS DESK : ಭಾರತ ಮುಂದಿನ 15 ವರ್ಷಗಳಲ್ಲಿ ಫುಡ್ ಹಬ್ ಆಗಿ ಬದಲಾಗುವ ಎಲ್ಲಾ ಸಾಧ್ಯತೆಗಳಿರುವುದರಿಂದ ಅಧಿಕ ಮೌಲ್ಯವಿರುವ ಹಣ್ಣುಗಳನ್ನು ಬೆಳೆಯಲು ಬೆಳೆಗಾರರು ಮುಂದಾಗಬೇಕು. ಆ ಮೂಲಕ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬಹುದು ಎಂದು ನವದೆಹಲಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮಹಾ ನಿರ್ದೇಶಕ ಡಾ.ಎಸ್.ಕೆ.ಸಿಂಗ್ ತಿಳಿಸಿದ್ದಾರೆ. ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಡೆದ ಬೆಣ್ಣೆಹಣ್ಣು ಕ್ಷೇತ್ರೋತ್ಸವ ಹಾಗೂ ವೈವಿಧ್ಯತೆ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದೇಶಿ ತೋಟಗಾರಿಕಾ ಬೆಳೆಗಾರರ ಅಭಿವೃದ್ಧಿ ಸಂಘವನ್ನು ಆರಂಭಿಸಲಾಗಿದ್ದು, ಬೆಳೆಗಾರರು ಸಂಘದಲ್ಲಿ ಸೇರ್ಪಡೆಗೊಳ್ಳುವ ಮೂಲಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ರೈತರು ನೇರವಾಗಿ ಹಣ್ಣಿನ ಗಿಡಗಳನ್ನು ಖರೀದಿ ಮಾಡಿದರೆ ಹೆಚ್ಚು ವೆಚ್ಚವಾಗುತ್ತದೆ. ಸಂಘದ ಮೂಲಕ ಎಲ್ಲರೂ ಒಗ್ಗೂಡಿ ಖರೀದಿಸಿದಾಗ ವೆಚ್ಚ ಕಡಿಮೆಯಾಗಲಿದೆ. ಅಲ್ಲದೆ ಇದರಿಂದ ಇತರೆ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಕೊಡಗು ಸೇರಿದಂತೆ ರಾಜ್ಯದ ಪ್ರಮುಖ ಆಯ್ದ ಭಾಗದಲ್ಲಿ ಆಫ್ ಸೀಸನ್ ಲಿಚ್ಚಿ, ಬಟರ್ ಫ್ರೂಟ್ ಸೇರಿದಂತೆ ಅಧಿಕ ಮೌಲ್ಯದ ಹಣ್ಣುಗಳನ್ನು ಬೆಳೆಯಬಹುದಾಗಿದೆ. ಹೆಚ್ಚು ಬೇಡಿಕೆ ಇರುವ ಹಣ್ಣುಗಳನ್ನು ಬೆಳೆಯಲು ರೈತರು ಉತ್ಸುಕತೆ ತೋರಬೇಕೆಂದು ಸಲಹೆ ನೀಡಿದರು. ಭಾರತ ಸರ್ಕಾರದ ತೋಟಗಾರಿಕಾ ಸಮಗ್ರ ಅಭಿವೃದ್ಧಿ ಮಿಷನ್ ನ ನಿರ್ದೇಶಕ ಕೆ.ಎನ್.ವರ್ಮ ಮಾತನಾಡಿ ರೈತರಿಗೆ ಉತ್ತಮ ಗುಣಮಟ್ಟದ ಹಣ್ಣಿನ ಗಿಡಗಳನ್ನು ನೀಡುವುದು ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಪೂರಕ ಕ್ರಮ ಕೈಗೊಳ್ಳಲಾಗುವುದು. ಎಂಐಡಿಹೆಚ್ ಯೋಜನೆಯಡಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಪ್ರಗತಿಪರ ಕೃಷಿಕ ಬೋಸ್ ಮಂದಣ್ಣ ಮಾತನಾಡಿ ಕೊಡಗು ಪ್ರತ್ಯೇಕ ರಾಜ್ಯವಾಗಿದ್ದಾಗ ಚೆಟ್ಟಳ್ಳಿ ಕೇಂದ್ರವನ್ನು ಆರಂಭಿಲಾಗಿತ್ತು. ಕೊಡಗಿನ ಕಿತ್ತಳೆ ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೊಡಗಿನ ಕಿತ್ತಳೆ ಮರೆಯಾಗಿದೆ. ಆದ್ದರಿಂದ ಚೆಟ್ಟಳ್ಳಿ ಕೇಂದ್ರದಿಂದ ಕೊಡಗಿನ ಕಿತ್ತಳೆ ಪುನಶ್ಚೇತನಕ್ಕೆ ಮೂರು ವರ್ಷಗಳ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು. ಇತ್ತೀಚಿನ ದಿನಗಳಲ್ಲಿ ಕೃಷಿಕರಿಗೆ ಮಾರುಕಟ್ಟೆ ಬಹುದೊಡ್ಡ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಚೆಟ್ಟಳ್ಳಿಯಲ್ಲಿ ವಿದೇಶಿ ತೋಟಗಾರಿಕಾ ಬೆಳೆಗಾರರು ಅಭಿವೃದ್ಧಿ ಸಂಘವನ್ನು ಆರಂಭಿಸಿದ್ದು, ಇದರ ಲಾಭವನ್ನು ಬೆಳೆಗಾರರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಐಸಿಎಆರ್ ಹಣ್ಣಿನ ವಿಭಾಗದ ಯೋಜನಾ ಸಹ ಸಂಯೋಜಕ ಪ್ರಕಾಶ್ ಪಾಟೀಲ್ ಮಾತನಾಡಿ ಕೇಂದ್ರ ಸರ್ಕಾರ ಆತ್ಮ ನಿರ್ಭರ್ ಮೂಲಕ ಸ್ವದೇಶಿ ವಸ್ತುಗಳ ಉತ್ಪಾದನೆ ಉತ್ತೇಜಿಸುತ್ತಿದೆ. ಅದರಂತೆ ನಾವು ಇಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳುವ ತೋಟಗಾರಿಕಾ ಹಣ್ಣುಗಳನ್ನು ಬೆಳೆಯಬೇಕು. ಇದಕ್ಕೆ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದರು. ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥ ರಾಜೇಂದಿರನ್ ಮಾತನಾಡಿದರು. ಹಣ್ಣು ವಿಭಾಗದ ವಿಜ್ಞಾನಿ ಡಾ. ಮುರುಳೀಧರ್ ಭಾರತದಲ್ಲಿ ಬೆಣ್ಣೆಹಣ್ಣಿನ ಕೃಷಿ, ನಿರೀಕ್ಷೆಗಳು ಹಾಗೂ ಸಮಸ್ಯೆಗಳ ಬಗ್ಗೆ ವಿಷಯ ಮಂಡಿಸಿದರು. ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ರಾಣಿ ಬೆಣ್ಣೆಹಣ್ಣಿನಲ್ಲಿ ಪ್ರಮುಖ ಕೀಟ ಮತ್ತು ರೋಗಗಳು ಹಾಗೂ ಅವುಗಳ ನಿರ್ವಹಣೆ ಬಗ್ಗೆ ವಿವರಿಸಿದರು. ಇದೇ ಸಂದರ್ಭ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕ ಪ್ರಾಯೋಗಿಕ ಕೇಂದ್ರದಿಂದ ಆರಂಭಿಸಲಾಗಿರುವ ವಿದೇಶಿ ತೋಟಗಾರಿಕಾ ಬೆಳೆಗಾರರ ಅಭಿವೃದ್ಧಿ ಸಂಘವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.