ಮಡಿಕೇರಿ ಜೂ.16 NEWS DESK : ಗೋಣಿಕೊಪ್ಪ ಪಟ್ಟಣದ ಕೀರೆಹೊಳೆಯ ಜಾಗ ಒತ್ತುವರಿಯಾಗಿದ್ದರೆ ತಕ್ಷಣ ತೆರವು ಕಾರ್ಯಾಚರಣೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಸೂಚನೆ ನೀಡಿದ್ದಾರೆ.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ‘ಟ್ರಾö್ಯಸ್ ಬ್ಯಾರಿಕೇಡ್’ ನ್ನು ಉದ್ಘಾಟಿಸಿ ವನ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೀರೆಹೊಳೆಯನ್ನು ಹಿಂದಿನಂತೆ ಸಂರಕ್ಷಿಸಬೇಕಾಗಿದೆ, ಈ ಕಾರ್ಯಕ್ಕೆ ಮರು ಚಾಲನೆ ನೀಡಬೇಕು. ನದಿ, ತೊರೆ, ಹಳ್ಳಕೊಳ್ಳ ಹಾಗೂ ಜಲಾಶಯವನ್ನು ನಾಶ ಮಾಡಿ ಅಭಿವೃದ್ಧಿ ಮಾಡಬೇಕಿಲ್ಲ, ಅರಣ್ಯ, ಪರಿಸರ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಿ, ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಪ್ರತಿಪಾದಿಸಿದರು.
ಕೀರೆಹೊಳೆಯಲ್ಲಿ ಟ್ರ್ಯಾಸ್ ಬ್ಯಾರಿಕೇಡ್ ಅಳವಡಿಸಿರುವುದರಿಂದ ಘನತ್ಯಾಜ್ಯ ವಿಲೇವಾರಿಗೆ ಸಹಕಾರಿಯಾಗಿದೆ. ಇದೊಂದು ರೀತಿಯ ಸಣ್ಣ ಪ್ರಯೋಗ ಎಂದರು.
ಮನೆ, ವಿದ್ಯುತ್, ಕುಡಿಯುವ ನೀರು ಮತ್ತಿತರ ಸೌಲಭ್ಯಕ್ಕಾಗಿ ಮನವಿಗಳು ಬರುತ್ತವೆ, ಆದರೆ ಸ್ವಚ್ಚತಾ ಕಾರ್ಯಕ್ಕೆ ಮನವಿ ಮಾಡುವುದು ಕಡಿಮೆ. ‘ಕ್ಲೀನ್ ಕೂರ್ಗ್’ ತಂಡದವರು ಕೀರೆಹೊಳೆ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ಪರಿಸರ ಸಂರಕ್ಷಿಸುವಲ್ಲಿ ಸರಕಾರದೊಂದಿಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದು ಪೊನ್ನಣ್ಣ ತಿಳಿಸಿದರು.
ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು, ನದಿ, ತೊರೆ, ಹಳ್ಳಕೊಳ್ಳಗಳನ್ನು ಉಳಿಸಬೇಕು. ವ್ಯಾಪಾರ, ವಾಣಿಜ್ಯ, ಉದ್ಯಮ ನಡೆಸುವವರು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಎಲ್ಲರೂ ಕೈಜೋಡಿಸಿದಾಗ ಮಾತ್ರ ಸ್ವಚ್ಛ, ಸುಂದರ ಕೊಡಗು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕ್ಲೀನ್ ಕೂರ್ಗ್ ನ ಪವನ್ ಅಯ್ಯಪ್ಪ ಮಾತನಾಡಿ ತಾತ, ಮುತ್ತಾತಂದಿರು ನಮಗಾಗಿ ನದಿ, ತೊರೆ, ಜಲಾಶಯವನ್ನು ಉಳಿಸಿದ್ದಾರೆ. ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ಎಲ್ಲರ ಕರ್ತವ್ಯ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್ ಮಾತನಾಡಿ ಯಾವುದೇ ನದಿ, ತೊರೆ, ಹಳ್ಳ ಕೊಳ್ಳಗಳಲ್ಲಿ ಜಲಚರಗಳು ಚೆನ್ನಾಗಿದ್ದರೆ ನೀರು ಶುದ್ಧವಾಗಿದೆ ಎಂದು ಅರ್ಥ. ಪರಿಸರ ಸಂರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಆ ನಿಟ್ಟಿನಲ್ಲಿ ಗಿಡಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಗೋಣಿಕೊಪ್ಪ ಗ್ರಾ.ಪಂ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿದರು. ಗ್ರಾ.ಪಂ ಉಪಾಧ್ಯಕ್ಷ ಮಂಜುಳಾ, ತಹಶೀಲ್ದಾರ್ ಮೋಹನ್ ಕುಮಾರ್, ಪಿಡಿಒ ತಿಮ್ಮಯ್ಯ, ಬಿ.ಎನ್.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.