ಮಡಿಕೇರಿ ಜೂ.19 NEWS DESK : ‘ಸ್ವಂತಕ್ಕಾಗಿ ಮತ್ತು ಸಮಾಜಕ್ಕಾಗಿ ಯೋಗ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಪ್ರಸಕ್ತ ಸಾಲಿನ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಗರದ ಕೆಳಗಿನ ಗೌಡ ಸಮಾಜದಲ್ಲಿ ಜೂ.21 ರಂದು ನಡೆಯಲಿದೆ ಎಂದು ಆಯುಷ್ ಇಲಾಖಾ ಅಧಿಕಾರಿ ಡಾ.ರೇಣುಕಾ ದೇವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, 2015ರಲ್ಲಿ ಆರಂಭಗೊಂಡ ಯೋಗ ದಿನಾಚರಣೆ ದಶಕದ ಆಚರಣೆಯ ಹಂತದಲ್ಲಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಗೌಡ ಸಮಾಜದಲ್ಲಿ ಬೆಳಗ್ಗೆ 6.30 ಗಂಟೆಗೆ ಯೋಗ ದಿನಾಚರಣೆಯ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಯೋಗ ಉದ್ಘಾಟಿಸಲಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಶಾಸಕರು, ಸಂಸದರು ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
::: 19 ಆಸನಗಳ ಪ್ರಾತ್ಯಕ್ಷಿಕೆ :::
ನಗರದ ಯೋಗ ಸಂಘಟನೆಯ ಸಂಚಾಲಕರಾದ ಕೆ.ಕೆ.ಮಹೇಶ್ ಕುಮಾರ್ ಮಾತನಾಡಿ, ಯೋಗ ದಿನದಂದು ಪ್ರತಿಯೊಬ್ಬರು ಅಭ್ಯಾಸ ಮಾಡಬಹುದಾದ ಅತ್ಯಂತ ಸರಳವಾದ 19 ಆಸನಗಳನ್ನು ಮತ್ತು ನಾಲ್ಕು ಪ್ರಾಣಾಯಾಮಗಳ ಪ್ರಾತ್ಯಕ್ಷಿಕೆಯನ್ನು ಏಕಕಾಲಕ್ಕೆ ಬೆಳಗ್ಗೆ 7 ರಿಂದ 7.45 ಗಂಟೆಯವರೆಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಯೋಗ ದಿನಾಚರಣೆಯಲ್ಲಿ ವಯಸ್ಸಿನ ಮಿತಿಗಳಿಲ್ಲದೆ ಯಾರು ಬೇಕಾದರು ಪಾಲ್ಗೊಳ್ಳಬಹುದಾಗಿದ್ದು, ಯೋಗ ದಿನಾಚರಣೆಯಲ್ಲಿ ಸುಮಾರು ಒಂದು ಸಾವಿರ ಮಂದಿ ಯೋಗಭ್ಯಾಸದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ಮಾಹಿತಿ ನೀಡಿದರು.
::: ‘ಯೋಗ ಜಾಥ’ :::
ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಜನರಲ್ಲಿ ಇದರ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಜೂ.20 ರಂದು ಬೆಳಗ್ಗೆ 8.30 ಕ್ಕೆ ನಗರದ ಗಾಂಧಿ ಮೈದಾನದಿಂದ ಕಾವೇರಿ ಕಲಾಕ್ಷೇತ್ರದವರೆಗೆ ‘ಯೋಗ ಜಾಥ’ವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಆಯುಷ್ ವೈದ್ಯರ ಸಂಘಟನೆಯಾದ ನೀಮಾದ ಅಧ್ಯಕ್ಷ ಡಾ.ರಾಜಾರಾಂ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಕಾಶ್ಮೀರದಲ್ಲಿ ಯೋಗ ದಿನಾಚರಣೆಗೆ ಚಾಲನೆಯನ್ನಿತ್ತು ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ದಕ್ಷಿಣದ ಕಾಶ್ಮೀರವೆಂದೇ ಪ್ರಖ್ಯಾತವಾದ ಕೊಡಗಿನ ಮಡಿಕೇರಿಯಲ್ಲಿ ಅದಕ್ಕೆ ಸ್ಪಂದನ ರೂಪವಾಗಿ ಎಲ್ಲರೂ ಒಗ್ಗೂಡಿ ಯೋಗ ದಿನವನ್ನು ಆಚರಿಸುತ್ತಿರುವುದಾಗಿ ತಿಳಿಸಿದರು.
ನೀಮಾ ಸಂಘಟನೆಯಿಂದ ಮುಂದಿನ ಸಾಲಿನ ಯೋಗ ದಿನಾಚರಣೆಯವರೆಗೆ ಒಂದು ವರ್ಷದ ಅವಧಿಯವರೆಗೆ ಜಿಲ್ಲೆಯ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಅವರ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ‘ಯೋಗ ಸಲಹೆ’ಯನ್ನು ಉಚಿತವಾಗಿ ನೀಡಲು ನಿರ್ಧರಿಸಿರುವುದಾಗಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಯುಷ್ ಇಲಾಖೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವ್ಯದ್ಯಾಧಿಕಾರಿ ಡಾ.ಅರುಣ್ ಹಾಗೂ ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಶಿಕ್ಷಕ ಸುಧಾಕರ್ ಉಪಸ್ಥಿತರಿದ್ದರು.