ಕುಶಾಲನಗರ, NEWS DESK ಆ. 22: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ (ಆ. 22ರಂದು) ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕಬ್, ಬುಲ್‌ಬುಲ್ ಮಕ್ಕಳಿಗೆ ದೇಶಭಕ್ತಿ ಗೀತೆಗಳ ತಾಲ್ಲೂಕು ಮಟ್ಟದ ಗೀತ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕುಶಾಲನಗರ ತಾಲ್ಲೂಕಿನ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಂದ ಆಗಮಿಸಿದ್ದ ಮಕ್ಕಳ ಗುಂಪು ಗಾಯನ ಸ್ಪರ್ಧೆ ಪ್ರೇಕ್ಷಕರ ಗಮನ ಸೆಳೆಯಿತು. ಮಕ್ಕಳು ವಿವಿಧ ದೇಶಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ, ತಮ್ಮಲ್ಲಿರುವ ವಿಭಿನ್ನ ಗಾಯನ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಸ್ಪರ್ಧೆಯು ಮಕ್ಕಳಲ್ಲಿರುವ ಗಾಯನ ಪ್ರತಿಭೆಯನ್ನು ಗುರುತಿಸಲು ಉತ್ತಮ ವೇದಿಕೆಯಾಯಿತು.
ಮಕ್ಕಳ ಗೀತ ಗಾಯನ ಸ್ಪರ್ಧೆಯ ಉದ್ದೇಶ ಕುರಿತು ಮಾತನಾಡಿದ ಜಿಲ್ಲಾ ಸಂಸ್ಥೆಯ ಸ್ಕೌಟ್ಸ್ ವಿಭಾಗದ ಆಯುಕ್ತ ಜಿಮ್ಮಿ ಸಿಕ್ವೇರಾ, ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡುವುದರಿಂದ ಅವರಲ್ಲಿ ರಾಷ್ಟ್ರೀಯ ಭಾವೈಕ್ಯತೆ ಹಾಗೂ ದೇಶಪ್ರೇಮ ಬೆಳೆಯುತ್ತದೆ. ಇದರಿಂದ ಬಾಲ್ಯದಿಂದಲೇ ಮಕ್ಕಳಲ್ಲಿ ದೇಶಭಕ್ತಿಯ ಭಾವನೆ ಮೂಡುತ್ತದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಹಾಗೂ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಉತ್ತಮ ವೇದಿಕೆ ಒದಗಿಸುತ್ತದೆ ಎಂದರು. ದೇಶದ ಹಿರಿಮೆಯನ್ನು ಸಾರುವ ದೇಶಭಕ್ತಿ ಗೀತೆಗಳು ವಿದ್ಯಾರ್ಥಿಗಳಲ್ಲಿ ಅಗಾಧ ದೇಶಪ್ರೇಮದ ಜೊತೆಗೆ ನಾಡು-ನುಡಿ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉದ್ದೇಶ ಕುರಿತು ಮಾಹಿತಿ ನೀಡಿದ ಜಿಮ್ಮಿ ಸಿಕ್ವೇರಾ ಅವರು, ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮೂಲಕ ಶಿಸ್ತು, ಸಂಯಮ ಹಾಗೂ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಲು ಇಂತಹ ಸ್ಪರ್ಧೆಗಳು ಉತ್ತಮ ವೇದಿಕೆ ಒದಗಿಸುತ್ತವೆ ಎಂದರು.
ಗೀತ ಗಾಯನದಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಸೌಹಾರ್ದತೆ ಹಾಗೂ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವುದರೊಂದಿಗೆ ಸ್ಪರ್ಧಾ ಮನೋಭಾವವನ್ನು ಬೆಳೆಸಲು ಸಹಕಾರಿಯಾಗಿವೆ ಎಂದರು.
ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ನಡೆಸುತ್ತಿರುವ ವೈವಿಧ್ಯಮಯ ಕಾರ್ಯಚಟುವಟಿಕೆಗಳನ್ನು ಗುರುತಿಸಿ ತಮ್ಮ ಸ್ಥಳೀಯ ಸಂಸ್ಥೆಗೆ ಜಿಲ್ಲಾ ಪುರಸ್ಕಾರ ಲಭಿಸಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ. ಪ್ರೇಮಕುಮಾರ್, ಜಿಲ್ಲಾ ಸಹಾಯಕ ಗೈಡ್ಸ್ ಆಯುಕ್ತೆ ಸಿ.ಎಂ. ಸುಲೋಚನ, ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ ಎ.ಎಸ್. ತಮ್ಮಯ್ಯ, ಉಪಾಧ್ಯಕ್ಷ ಅರುಣಕುಮಾರ್, ಕಾರ್ಯದರ್ಶಿ ಎಂ.ಎಸ್. ಗಣೇಶ್, ಸಹ ಕಾರ್ಯದರ್ಶಿ ಎಸ್.ಆರ್. ಶಿವಲಿಂಗ, ಕೋಶಾಧಿಕಾರಿ ಎನ್.ಎಸ್. ನರೇಶ್, ಸಂಸ್ಥೆಯ ಜಿಲ್ಲಾ ಸಂಘಟಕಿ ಯು.ಸಿ. ದಮಯಂತಿ, ಸ್ಕೌಟ್ಸ್ ವಿಭಾಗದ ಎಡಿಸಿ ಬಿ.ಕೆ. ಗಣೇಶ್, ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಸ್. ಗೋಪಾಲ್, ನಿವೃತ್ತ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಶಿಕ್ಷಕರು, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಇದ್ದರು. ಗೈಡ್ ಶಿಕ್ಷಕಿ ಕೆ.ಕೆ. ಗಾಯತ್ರಿ ಕಾರ್ಯಕ್ರಮ ನಿರ್ವಹಿಸಿದರು.
ಇದೇ ವೇಳೆ ಸಂಸ್ಥೆಯ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆಗಿರುವ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್ ಹಾಗೂ ಕುಶಾಲನಗರ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಗೈಡ್ ಶಿಕ್ಷಕಿ ಭವ್ಯ ಅವರನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ರಾಜ್ಯ ಪುರಸ್ಕಾರ ಪಡೆದ ಮಕ್ಕಳಿಗೆ ಸನ್ಮಾನ
ಇದೇ ವೇಳೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ರಾಜ್ಯ ಪುರಸ್ಕಾರ ಪಡೆದ ಸುಂಟಿಕೊಪ್ಪ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಬುಲ್‌ಬುಲ್ಸ್ ವಿಭಾಗದ ಫಾತಿಮಾ ಮತ್ತು ಅಫೀಜಾ ಹಾಗೂ ಕಬ್ಸ್ ವಿಭಾಗದ ದಿಶಾನ್ ಮತ್ತು ತನುಷ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯೂ ಆಗಿರುವ ಸಂಸ್ಥೆಯ ಲೇಡಿ ಕಬ್ ಮಾಸ್ಟರ್ ಈವ ಜೀತ ಬೆನ್ನಿಸ್ ಸೇರಿದಂತೆ ಸ್ಕೌಟ್ಸ್ ಮತ್ತು ಗೈಡ್ಸ್‌ನ ಶಿಕ್ಷಕರು ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.








