ಸಿದ್ದಾಪುರ ಜೂ.19 NEWS DESK (ಅಂಚೆಮನೆ ಸುಧಿ) : ನೆಲ್ಲಿಹುದಿಕೇರಿ, ಅಭ್ಯತ್ ಮಂಗಲ, ವಾಲ್ನೂರು ತ್ಯಾಗತ್ತೂರು, ರಂಗಸಮುದ್ರ, ಅರೆಕಾಡು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಾಡಾನೆಗಳಿಂದಾಗುತ್ತಿರುವ ನಷ್ಟಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.
ನೀರು ಮತ್ತು ಆಹಾರ ಹುಡುಕಿಕೊಂಡು ಬರುತ್ತಿರುವ ಆನೆಗಳ ಹಿಂಡು ಕಾಫಿ ತೋಟಗಳು ಮಾತ್ರವಲ್ಲದೆ ಮನೆಯಂಗಳಕ್ಕೂ ದಾಳಿ ಮಾಡಿ ದಾಂಧಲೆ ನಡೆಸುತ್ತಿವೆ. ಕಾಡಾನೆಗಳ ದಾಳಿಯಿಂದ ಇಲ್ಲಿನ ಜನ ಆತಂಕದಲ್ಲಿದ್ದು, ಅರಣ್ಯ ಇಲಾಖೆ ಅಸಹಾಯಕವಾಗಿದೆ. ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರೆ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಮತ್ತು ತೋಟಗಳಿಗೆ ಆನೆಗಳು ಸ್ಥಳಾಂತರಗೊಳ್ಳುತ್ತಿವೆಯೇ ಹೊರತು ಮರಳಿ ಕಾಡು ಸೇರುತ್ತಿಲ್ಲ.
ಈ ಭಾಗದಲ್ಲಿ 6 ರಿಂದ 10 ಕಾಡಾನೆಗಳ ಹಿಂಡು ಸೇರಿಕೊಂಡಿದ್ದು, ಇವುಗಳಲ್ಲಿ ಕಾಲು ನೋವಿನಿಂದ ಕುಂಟುತ್ತಿರುವ ಆನೆಯೂ ಇದೆ. ಇದು ತೋಟಗಳ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ದೃಶ್ಯ ಸೆರೆಯಾಗಿದೆ. ಹತ್ತಾರು ಕಾಡಾನೆಗಳು ತೋಟ ಮತ್ತು ಕೃಷಿಭೂಮಿಗೆ ಹಾನಿಗೊಳಿಸುತ್ತಿದ್ದು, ಕೃಷಿಕ ವರ್ಗ ಆತಂಕದೊಂದಿಗೆ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದೆ.
ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಾಡಾನೆಗಳಿಂದಾಗುತ್ತಿರುವ ನಷ್ಟಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಆನೆ ದಾಳಿಯಿಂದ ಮೃತಪಟ್ಟವರಿಗೆ ಮಾತ್ರ ಪರಿಹಾರ ನೀಡಲಾಗುತ್ತಿದ್ದು, ಗಾಯಾಳುಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಗಾಯಾಳುಗಳ ಖರ್ಚು ವೆಚ್ಚವನ್ನು ಕೂಡ ಸರಕಾರವೇ ಭರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾಡಾನೆ ಹಾವಳಿ ತಡೆಗೆ ಇಲ್ಲಿಯವರೆಗೆ ಸರಕಾರ ಶಾಶ್ವತ ಪರಿಹಾರ ಸೂಚಿಸದೆ ಇರುವುದು ದುರಂತ. ಇತ್ತೀಚಿನ ದಿನಗಳಲ್ಲಿ ರೈಲ್ವೆ ಕಂಬಿಗಳ ಬೇಲಿ, ಸೋಲಾರ್ ಬೇಲಿ, ಕಂದಕ ನಿರ್ಮಾಣ ಕಾರ್ಯಗಳು ನಡೆಯುತ್ತಿಲ್ಲ. ಕಾಡಾನೆ ದಾಳಿ ಎಂದರೆ ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ, ಅಧಿಕಾರಿಗಳಿಗೆ ಇದರ ಗಂಭೀರತೆ ಅರ್ಥವಾಗುತ್ತಿಲ್ಲ. ಅರಣ್ಯ ಇಲಾಖೆಗೆ ಚೆಲ್ಲಾಟ, ಗ್ರಾಮಸ್ಥರಿಗೆ ಪ್ರಾಣ ಸಂಕಟ ಎಂಬತ್ತಾಗಿದೆ. ವನ್ಯಜೀವಿಗಳ ದಾಳಿಯಿಂದ ಬೇಸತ್ತು ಮೂಲ ನಿವಾಸಿಗಳು ಕೃಷಿ ಕ್ಷೇತ್ರದಿಂದಲೇ ದೂರವಾಗುವ ದಿನಗಳು ದೂರವಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.










