ಮಡಿಕೇರಿ ಜೂ.20 NEWS DESK : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡುವ ಮೂಲಕ ಬಡವರು ಹಾಗೂ ಕಾರ್ಮಿಕ ವರ್ಗವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆರೋಪಿಸಿ ಸಿಪಿಐಎಂನ ವಿರಾಜಪೇಟೆ ಘಟಕ ಪ್ರತಿಭಟನೆ ನಡೆಸಿತು.
ವಿರಾಜಪೇಟೆ ಪಟ್ಟಣದ ಗಡಿಯಾರ ಕಂಬದ ಬಳಿ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಸಿಪಿಐಎಂ ಪ್ರಮುಖರು ಹಾಗೂ ಕಾರ್ಯಕರ್ತರು ಸರಕಾರ ತನ್ನ ನಿರ್ಧಾರವನ್ನು ಬದಲಾಯಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ ಅಧಿಕಾರಕ್ಕೆ ಬರುವ ಮೊದಲು ಹಲವು ಗ್ಯಾರಂಟಿಗಳ ಆಮಿಷವೊಡ್ಡಿದ್ದ ಕಾಂಗ್ರೆಸ್ ಇದೀಗ ಸರಕಾರ ರಚನೆಯಾದ ನಂತರ ಜನಸಾಮಾನ್ಯರಿಗೆ ಹೊರೆಯಾಗುವ ರೀತಿಯಲ್ಲಿ ಬೆಲೆ ಏರಿಕೆಯಲ್ಲಿ ತೊಡಗಿದೆ ಎಂದು ಟೀಕಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಅಧಿಕ ತೆರಿಗೆ ವಿಧಿಸಿರುವುದರಿಂದ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಇದು ಬಡವರು ಹಾಗೂ ಕಾರ್ಮಿಕ ವರ್ಗದ ಮೇಲೆ ಪರಿಣಾಮ ಬೀರುತ್ತಿದ್ದು, ಜೀವನ ಸಾಗಿಸುವುದೇ ಕಷ್ಟವಾಗಿದೆ. ಸರಕಾರ ತಕ್ಷಣ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಿರುವ ಹೆಚ್ಚಿನ ತೆರಿಗೆಯನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ನಗರ ಕಾರ್ಯದರ್ಶಿ ಕೆ.ಎಸ್.ರಮೇಶ್ ಸಾಜಿ ಮಾತನಾಡಿ ಐದು ಗ್ಯಾರಂಟಿಗಳನ್ನು ಜನರಿಗೆ ನೀಡಲಾಗದೆ ಪರದಾಡುತ್ತಿರುವ ಕಾಂಗ್ರೆಸ್ ಸರಕಾರ. ಏಕಾಏಕಿ ತೆರಿಗೆ ಹೊರೆಯನ್ನು ಹಾಕಿ ಭಾಗ್ಯಗಳನ್ನು ಪೂರೈಸುವ ಕಾರ್ಯಕ್ಕೆ ಕೈ ಹಾಕಿದೆ ಎಂದು ಆರೋಪಿಸಿದರು.
ಬಡವರ ವಿರೋಧಿ ಧೋರಣೆಯನ್ನು ಕೈಬಿಟ್ಟು ಬೆಲೆ ಏರಿಕೆ ನಿರ್ಧಾರದ ಬಗ್ಗೆ ಪುನರ್ ಪರಿಶೀಲನೆ ನಡೆಸಿ ಜನಪರವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪಕ್ಷದ ಪ್ರಮುಖರಾದ ಹರಿದಾಸ್, ರತೀಶ್ ಕೆ.ಎಸ್, ಖಾಲಿದ್, ಖಾಸಿಂ, ಹಮೀದ್, ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.











