ಮಡಿಕೇರಿ ಜೂ.21 NEWS DESK : ರಾಜಕೀಯ ದುರುದ್ದೇಶದಿಂದ ವಿರಾಜಪೇಟೆಯ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿಯನ್ನು ವಿರಾಜಪೇಟೆಯಲ್ಲಿ ಸುಟ್ಟಿರುವ ಘಟನೆಯನ್ನು ಕೊಡವಾಮೆರ ಕೊಂಡಾಟ ಸಂಘಟನೆ ಖಂಡಿಸಿದೆ
ಪಕ್ಷ ರಾಜಕಾರಣ ಅವರವರ ವೈಯಕ್ತಿಕ ಹಕ್ಕು, ಪ್ರತಿಭಟನೆ ಮಾಡುವುದು, ಪ್ರಶ್ನಿಸುವುದು ಪ್ರತಿಪಕ್ಷಗಳ ಕರ್ತವ್ಯ ಮತ್ತು ಹಕ್ಕು ಕೂಡ. ಆದರೆ ಸಂಬಂಧವೇ ಇಲ್ಲದ ವಿಚಾರಕ್ಕೆ ಪೊನ್ನಣ್ಣರ ಪ್ರತಿಕೃತಿ ದಹಿಸಿದ ಘಟನೆ ಇಡೀ ಕೊಡವ ಜನಾಂಗಕ್ಕೆ ಮಾಡಿದ ಅವಮಾನ. ಶವ ಯಾತ್ರೆ ಹಾಗೂ ಸಂಸ್ಕಾರಕ್ಕೆ ಕೊಡವ ಜನಾಂಗದಲ್ಲಿ ತನ್ನದೇ ಆದ ಮಹತ್ವವಿದೆ, ಗೌರವವವಿದೆ. ಆದರೆ ಆ ಪಾವಿತ್ರತೆಯನ್ನೂ ಮೀರಿ ಬೀದಿಯಲ್ಲಿ ನಡೆಸಿದ ಅಣಕುಯಾತ್ರೆ ಕಳವಳಕಾರಿ ಮತ್ತು, ಕೊಡವ ಜನಾಂಗದ ಅವಹೇಳನವಾದದ್ದು. ಪಕ್ಷಾತೀತವಾಗಿ, ಜನಾಂಗೀಯ ಪರವಾಗಿ ನಿಲುವುಳ್ಳವರಾಗಿ, ಈ ಘಟನೆಯನ್ನು ಕೊಡವಾಮೆರ ಕೊಂಡಾಟ ಸಂಘಟನೆ ತೀವ್ರವಾಗಿ ಖಂಡಿಸುವುದಾಗಿ ಸಂಘಟನೆಯ ಪ್ರಮುಖರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.