ಮಡಿಕೇರಿ ಜೂ.21 NEWS DESK : ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್‍ರವರ 133ನೇ ಜನ್ಮದಿನಾಚರಣೆ ಕಾರ್ಯಕ್ರಮ ಜೂ.28 ರಂದು ನಗರದಲ್ಲಿ ನಡೆಯಲಿದ್ದು, ಈ ಸಂದರ್ಭ ವೃದ್ಧಾಶ್ರಮದ ಹಿರಿಯರಿಗೆ ವಸ್ತ್ರ ವಿತರಣೆ ಮತ್ತು ಪೌರ ಕಾರ್ಮಿಕರಿಗೆ ಸ್ವೆಟರ್‍ಗಳನ್ನು ವಿತರಿಸಲಾಗುತ್ತದೆಂದು ದಸಂಸ ಜಿಲ್ಲಾ ಸಂಚಾಲಕರಾದ ಹೆಚ್.ಎಲ್.ದಿವಾಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ಆಯೋಜಿತ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ. ರಾಮರಾಜನ್ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ನವೀನ್, ಸಮಾಜ ಕಲ್ಯಾಣ ಇಲಾಖಾ ಉಪ ನಿರ್ದೇಶಕರಾದ ಶೇಖರ್, ನಗರಸಭಾ ಪೌರಾಯುಕ್ತರಾದ ವಿಜಯ್, ಹೊಟೇಲ್ ಉದ್ಯಮಿ ಪ್ರದೀಪ್ ಕರ್ಕೇರ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು.
ಹಿರಿಯರಿಗೆ ವಸ್ತ್ರ ವಿತರಣೆ- ದಸಂಸ ಸಂಘನೆಯ ವತಿಯಿಂದ ಕಳೆದ ಇಪ್ಪತ್ತೈದು ವರ್ಷಗಳಿಂದ ವೃದ್ಧಾಶ್ರಮದ ಹಿರಿಯ ಜೀವಗಳಿಗೆ ಡಾ. ಅಂಬೇಡ್ಕರ್ ಜನ್ಮದಿನಾಚರಣೆ ಸಂದರ್ಭ ಹೊಸ ಬಟ್ಟೆಗಳನ್ನು ನೀಡುತ್ತಾ ಬರಲಾಗುತ್ತಿದೆ. ಈ ಬಾರಿಯೂ ಸಮಾರಂಭದಲ್ಲಿ ನಗರದ ಶ್ರೀ ಶಕ್ತಿ ವೃದ್ಧಾಶ್ರಮ ಮತ್ತು ವಿಕಾಸ ವೃದ್ಧಾಶ್ರಮದಲ್ಲಿರುವ ಸುಮಾರು 60 ರಿಂದ 70 ಮಂದಿ ಹಿರಿಯ ಜೀವಗಳಿಗೆ ಬಟ್ಟೆಗಳನ್ನು ವಿತರಿಸಲಾಗುತ್ತದೆಂದು ತಿಳಿಸಿದರು.
ನಗರಸಭೆಯಲ್ಲಿ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುತ್ತಿರುವ ಸುಮಾರು 60 ಮಂದಿ ಪೌರ ಕಾರ್ಮಿಕರಿಗೆ ಸ್ವೆಟರ್‍ಗಳನ್ನು ಇದೇ ಸಂದರ್ಭ ವಿತರಿಸಲಾಗತ್ತದೆಂದು ಹೆಚ್.ಎಲ್.ದಿವಾಕರ್ ಮಾಹಿತಿ ನೀಡಿದರು.
ಸ್ವಚ್ಛತಾ ಕಾರ್ಯ- ಡಾ. ಅಂಬೇಡ್ಕರ್ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಜೂ.23 ರಂದು ಬೆಳಗ್ಗೆ 7.30 ಕ್ಕೆ ನಗರದ ಮೈಸೂರು ರಸ್ತೆಯ ಸ್ವಾಗತ ದ್ವಾರದಿಂದ ಸುದರ್ಶನ ವೃತ್ತದವರೆಗೆ ದಸಂಸದಿಂದ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯವನ್ನು ನಡೆಸಲಾಗುತ್ತದೆ. ಮುಂಬರುವ ದಿನಗಳಲ್ಲಿ ದಸಂಸ ಕನಿಷ್ಠ ಹದಿನೈದು ದಿನ ಇಲ್ಲವೆ ತಿಂಗಳಿಗೊಮ್ಮೆ ನಗರದ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸುವ ಮೂಲಕ ಪೌರ ಕಾರ್ಮಿಕರ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಲಿದೆಯೆಂದು ಸ್ಪಷ್ಟಪಡಿಸಿದರು.
ಮಡಿಕೇರಿ ನಗರಸಭಾ ವ್ಯಾಪ್ತಿಗೆ ಅನುಗುಣವಾಗಿ ಸ್ವಚ್ಛತಾ ಕಾರ್ಮಿಕರು ಇಲ್ಲದಿರುವುದರಿಂದ, ಲಭ್ಯವಿರುವ ಪೌರಕಾರ್ಮಿಕರೆ ನಗರ ಶುಚಿತ್ವದ ಜವಾಬ್ದಾರಿ ಹೊತ್ತು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರುಗಳ ಪರಿಶ್ರಮದ ನಡುವೆಯೂ ಸಾರ್ವಜನಿಕರು ಕಸವನ್ನು ಮನಬಂದಂತೆ ರಸ್ತೆಯಲ್ಲಿ ಒಗೆಯುವ ಮನಸ್ಥಿತಿ ಹೊಂದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಹೆಚ್.ಎಲ್. ದಿವಾಕರ್, ನಗರ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಸಂಘಟನೆ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ಜನರ ಸಂಕಷ್ಟಗಳಿಗೆ ಸ್ಪಂದನೆ- ಮುಂಬರುವ ದಿನಗಳಲ್ಲಿ ದಸಂಸ ನಗರದ ಪ್ರತಿ ಬಡಾವಣೆಗಳಿಗೆ ತೆರಳಿ ಅಲ್ಲಿನ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಪ್ರಯತ್ನ ನಡೆಯಲಿದೆ. ಸಾರ್ವಜನಿಕರು ತಮ್ಮ ಬಡಾವಣೆಗಳ ಸಮಸ್ಯೆಗಳ ಬಗ್ಗೆ ಅಹವಾಲುಗಳನ್ನು ತಮಗೆ ನೀಡಿದಲ್ಲಿ ಅಗತ್ಯ ಸ್ಪಂದನೆಗೆ ಪ್ರಯತ್ನಿಸಲಾಗುತ್ತದೆಂದು ದಿವಾಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ವಿಭಾಗೀಯ ಸಂಚಾಲಕರಾದ ಎನ್. ವೀರಭದ್ರಯ್ಯ, ನಗರ ಸಂಚಾಲಕರಾದ ಹೆಚ್.ಎ. ರವಿ, ಸಂಘಟನಾ ಸಂಚಾಲಕರಾದ ವೇಣು ಕಿಶೋರ್, ಕಂಬಿಬಾಣೆ ಸಂಘಟನಾ ಸಂಚಾಲಕ ಶರವಣ, ಗ್ರಾಮ ಸಂಚಾಲಕ ಪ್ರಸಾದ್ ಉಪಸ್ಥಿತರಿದ್ದರು.