ಮಡಿಕೇರಿ ಜೂ.22 NEWS DESK : ಪೆಟ್ರೋಲ್-ಡೀಸೆಲ್ ದರ ಹೆಚ್ಚಳದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮಂದಿಯ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಕಾಂಗ್ರೆಸ್ ದಬ್ಬಾಳಿಕೆಯ ಮತ್ತು ಬೆದರಿಕೆಯ ತಂತ್ರ ಅನುಸರಿಸುತ್ತಿದೆ. ಇದಕ್ಕೆ ಬಿಜೆಪಿ ಎಂದಿಗೂ ಜಗ್ಗುವುದಿಲ್ಲವೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಧನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ನಡೆದಂತೆ ವಿರಾಜಪೇಟೆಯಲ್ಲಿಯೂ ಪ್ರತಿಭಟನೆ ನಡೆದಿದೆ. ಹೀಗಿದ್ದೂ, ರಾಜ್ಯದ ಯಾವುದೇ ಭಾಗದಲ್ಲಿ ದಾಖಲಾಗದ ಪ್ರಕರಣವನ್ನು ವಿರಾಜಪೇಟೆಯಲ್ಲಿ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರ ವಿರುದ್ಧ ದಾಖಲಿಸಲಾಗಿದೆ. ಇಂತಹ ಪ್ರಕರಣಗಳಿಗೆ ಬಿಜೆಪಿ ಎಂದಿಗೂ ಹೆದರುವುದಿಲ್ಲ. ಇದನ್ನು ಕಾನೂನಾತ್ಮಕವಾಗಿ ಎದುರಿಸುವುದಾಗಿ ಹೇಳಿದರು. ಪ್ರತಿಭಟನೆಯಿಂದ ಯಾವುದೇ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಮತ್ತು ಪ್ರತಿಭಟನೆಗೆ ಪೂರ್ವಾನುಮತಿಯನ್ನು ಪಡೆಯಲಾಗಿತ್ತು ಎಂದು ಲೋಕೇಶ್ ಸ್ಪಷ್ಟಪಡಿಸಿದರು. ಕಳೆದ ಒಂದು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಜನತೆ ತಿರಸ್ಕರಿಸಿರುವುದಲ್ಲದೆ, ವಿರಾಜಪೇಟೆ ಕ್ಷೇತ್ರದಲ್ಲಿಯೆ 32 ಸಾವಿರಕ್ಕೂ ಹೆಚ್ಚಿನ ಮತಗಳ ಮುನ್ನಡೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ನಡೆಯುವ ಯಾವುದೇ ಜನವಿರೋಧಿ ಕಾರ್ಯಕ್ರಮಗಳನ್ನು ಬಿಜೆಪಿ ಮುಂದೆಯೂ ಪ್ರತಿಭಟಿಸಲಿದೆ ಎಂದರು. ಕಳೆದ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ನಡೆದಿದೆ ಮತ್ತು ಮುಂದೆ ಯಾವ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎನ್ನುವುದನ್ನು ಶಾಸಕರು ತಿಳಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜಮ್ಮಾ ಜಾಗಗಳಲ್ಲಿನ ಮರದ ಹಕ್ಕನ್ನು ಕಸಿಯುವ ಪ್ರಯತ್ನ ನಡೆದ ಸಂದರ್ಭ ಬಿಜೆಪಿ ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದೆ. ಧಾರ್ಮಿಕ ಕೇಂದ್ರಗಳಲ್ಲಿನ ತಲೆತಲಾಂತರಗಳಿಂದ ಪೂಜಾ ಕಾರ್ಯಗಳಲ್ಲಿ ಬಳಸುತ್ತಿದ್ದ ಪ್ರಾಣಿ ಕೊಂಬು ಮೊದಲಾದವುಗಳನ್ನು ಕಸಿಯುವ ಪ್ರಯತ್ನವನ್ನು ಈ ಸರ್ಕಾರ ಮಾಡಿದೆಯೆಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ದರ ಹೆಚ್ಚಳ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಶಾಸಕರ ಪ್ರತಿಕೃತಿ ದಹಿಸಿರುವುದು ಹೋರಾಟದ ಭಾಗವಷ್ಟೆ ಎಂದು ಸಮರ್ಥಿಸಿಕೊಂಡರು. ಈ ಹಿಂದೆ ಕೆ.ಜಿ.ಬೋಪಯ್ಯ ಅವರು ಅಧಿಕಾರದಲಿದ್ದ ಸಂದರ್ಭ ಇದೇ ಕಾಂಗ್ರೆಸ್ಸಿಗರು ಅವರ ಪ್ರತಿಕೃತಿ ದಹಿಸಿರಲಿಲ್ಲವೆ ಎಂದು ಪ್ರಶ್ನಿಸಿದರು.
ಪ್ರತಿಭಟನೆ ನಡೆಸಿದ ಬಿಜೆಪಿಗರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಮೊದಲು ಇದನ್ನು ಹಿಂದಕ್ಕೆ ಪಡೆಯಲಿ ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ತಳೂರು ಕಿಶೋರ್ ಕುಮಾರ್, ಜಿಲ್ಲಾ ವಕ್ತಾರ ಬಿ.ಕೆ.ಅರುಣ್ ಕುಮಾರ್, ವಿರಾಜಪೇಟೆ ಮಂಡಲ ಅಧ್ಯಕ್ಷ ಮಂಜು ಗಣಪತಿ ಹಾಗೂ ವಕ್ತಾರ ರಾಕೇಶ್ ದೇವಯ್ಯ ಉಪಸ್ಥಿತರಿದ್ದರು.
Breaking News
- *ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮ ದಿನಾಚರಣೆ : ವಿದ್ಯಾರ್ಥಿಗಳು ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಳ್ಳಲು ಕರೆ*
- *ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ*
- *ಗುಡ್ಡೆಹೊಸೂರು : ವಿವಿಧ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ*
- *ರಾಜ್ಯ ಮುಕ್ತ ವಿವಿ ಪ್ರಾದೇಶಿಕ ಕೇಂದ್ರದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ 126ನೇ ಜನ್ಮ ದಿನಾಚರಣೆ*
- *ಜನವರಿ 31 ರಂದು ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆಶಿ ಭೇಟಿ*
- *ಮಡಿಕೇರಿ ಹೊರ ವಲಯದಲ್ಲಿ ನಡೆದ ಕೊಲೆ, ಕಳವು ಪ್ರಕರಣ : ಅನಿಲ್ ಗೆ ಜೀವಾವಧಿ ಶಿಕ್ಷೆ*
- *ಸೋಮವಾರಪೇಟೆ ಬ್ರಾಹ್ಮಣ ಸಮಾಜ ಖಂಡನೆ*
- *ಅಶಾಂತಿ ಸೃಷ್ಟಿಸುವುದು ಸರಿಯಲ್ಲ : ವಿಶೇಷ ತಂಡ ರಚಿಸಲಾಗಿದೆ*
- *ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಸ್ಥಾನದ ‘ದಶಮಿ’ ಪುಸ್ತಕ ಅನಾವರಣ*
- *ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 126ನೇ ಜಯಂತಿ ಆಚರಣೆ*