ಮಡಿಕೇರಿ, ಜೂ.24 NEWS DESK : ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಉತ್ತಮ ನಾಯಕತ್ವ ಗುಣ ಹಾಗೂ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಅವರಲ್ಲಿ ಭ್ರಾತ್ವತ್ವ ಬೆಳೆಸುವ ಮೂಲಕ ಸಮಾಜದ ಉತ್ತಮ ಹಾಗೂ ಜವಾಬ್ದಾರಿ ನಾಗರಿಕರನ್ನಾಗಿ ರೂಪಿಸಲು ಶ್ರಮಿಸಬೇಕು ಎಂದು ಮಾಜಿ ಸಚಿವ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಕರ್ನಾಟಕ ರಾಜ್ಯದ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಕರೆ ನೀಡಿದರು.
ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ , ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಿಕ್ಷಕರಿಗೆ ಒಂದು ವಾರ ಕಾಲ ಏರ್ಪಡಿಸಿದ್ದ ಜಿಲ್ಲಾಮಟ್ಟದ ಮೂಲ ತರಬೇತಿ ಹಾಗೂ ಮುಂದುವರಿದ ತರಬೇತಿಯ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆಯಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದ ಜತೆಗೆ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯ. ಹಾಗಾಗಿ ಎಲ್ಲಾ ಶಾಲಾ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಸೇರ್ಪಡೆಗೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಸ್ಕೌಟಿಂಗ್ ಮತ್ತು ಗೈಡಿಂಗ್ ಅನ್ನು “ಯುವಜನರಿಗೆ ಸ್ವಯಂಪ್ರೇರಿತ ಶಿಸ್ತು, ಸಂಯಮ ಉತ್ತಮ ನಾಯಕತ್ವ ಬೆಳೆಸುವ ಹಾಗೂ ಭಾತೃತ್ವ ಮತ್ತು ಸೇವಾ ಮನೋಭಾವ ಬೆಳೆಸುವ ಶೈಕ್ಷಣಿಕ ಆಂದೋಲನವಾಗಿದೆ, ಇದು ಮೂಲ, ಜನಾಂಗ ಅಥವಾ ಧರ್ಮದ ಭೇದವಿಲ್ಲದೆ ಎಲ್ಲರಿಗೂ ಮುಕ್ತವಾಗಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಸಂಸ್ಕಾರ ಹಾಗೂ ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸ ಹೆಚ್ಚಾಗಬೇಕು. ಮಕ್ಕಳ ಬದುಕಿಗೆ ಅತ್ಯಂತ ಮಹತ್ವದ್ದಾದ ಪರಿಸರ ಜಾಗೃತಿ, ಸ್ವಚ್ಛತೆ ಹಾಗೂ ಪರಿಸರ ಉಳಿಸಿ-ಬೆಳೆಸುವ ಕಾರ್ಯವನ್ನು ಮಕ್ಕಳಲ್ಲಿ ತುಂಬಬೇಕು. ಆರೋಗ್ಯಕ್ಕೆ ಅತ್ಯವಶ್ಯಕವಾದ ಯೋಗಾಭ್ಯಾಸವನ್ನು ಮಕ್ಕಳಲ್ಲಿ ಹೆಚ್ಚಾಗಿ ಬೆಳೆಸಬೇಕು ಎಂದು ಸಿಂಧ್ಯ ಹೇಳಿದರು.
ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು-ಬರಹ ಕಲಿಯುವುದರ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರಿಸುವ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕಿದೆ ಎಂದು ಅವರು ಸಲಹೆ ನೀಡಿದರು.
ದೇಶದಲ್ಲಿ ಸೇನಾ ಸೇವೆಗೆ ಹೆಸರಾದ ಕೊಡಗಿನಲ್ಲಿ ಜನ್ಮವೆತ್ತಿ ಸೇನಾ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ದೇಶದ ಸೇನಾ ಕಣ್ಮಣಿಗಳಾದ ಜನರಲ್ ಕಾರ್ಯಪ್ಪ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಶಿಸ್ತು , ವಿನಯ, ಶಿಸ್ತುಬದ್ಧ ಜೀವನ, ಬುದ್ದಿವಂತಿಕೆ ಹಾಗೂ ಚಾಣಾಕ್ಷತನವು ದೇಶಕ್ಕೆ ಮಾದರಿಯಾದುದು. ಇಂದಿನ ವಿದ್ಯಾರ್ಥಿ ಹಾಗೂ ಯುವ ಸಮುದಾಯ ಅವರ ಆದರ್ಶ ವ್ಯಕ್ತಿತ್ವವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಪಿ.ಜಿ.ಆರ್.ಸಿಂಧ್ಯ ಸಲಹೆ ನೀಡಿದರು.
ಕೊಡಗಿನ ಜನರ ಶಿಸ್ತುಬದ್ಧ ಜೀವನ, ಸೇನಾ ಪ್ರೀತಿ, ಜಿಲ್ಲೆಯ ಕಲೆ, ಸಂಸ್ಕೃತಿಯನ್ನು ಬೆಳೆಸಲು ಜಿಲ್ಲೆಯ ಜನತೆ ಹೊಂದಿರುವ ಬದ್ಧತೆ ಇತರರಿಗೆ ಮಾದರಿಯಾದುದು.
ಸ್ಕೌಟ್ಸ್ , ಗೈಡ್ಸ್ ನ ಸಾಹಸಮಯ ಕ್ರೀಡೆಗಳ ಚಟುವಟಿಕೆಗಳ ರೂವಾರಿಯಾದ ಜಿಮ್ಮಿ ಸಿಕ್ವೇರಾ ಅವರ ಅನನ್ಯ ಸೇವೆಯು ನಮ್ಮ ಸಂಸ್ಥೆಗೆ ತುಂಬಾ ಸಹಕಾರಿಯಾಗಿದೆ ಎಂದರು.
ಜಿಲ್ಲೆಯ ಕೊಡವ ಸಂಸ್ಕೃತಿಯನ್ನು ದೇಶಕ್ಕೆ ಪರಿಚಯಿಸಿದ ರಾಣಿ ಮಾಚಯ್ಯ ಅವರ ಸಾಂಸ್ಕೃತಿಕ ಕಲೆಯನ್ನು ಗುರುತಿಸಿ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿ ಎನಿಸಿದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಜಿಲ್ಲೆಗೆ ಸಂದ ಪ್ರಶಸ್ತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸ್ಕೌಟ್ಸ್, ಗೈಡ್ಸ್ ನ ಮೌಲ್ಯಗಳನ್ನು ಕಲಿಸುವ ಮೂಲಕ ಅವರಲ್ಲಿ ಉತ್ತಮ ನಾಗರಿಕ ಮೌಲ್ಯಗಳು, ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವುದರೊಂದಿಗೆ ಅವರನ್ನು ತುರ್ತು ಸಂದರ್ಭಗಳಲ್ಲಿ ತಮ್ಮನ್ನು ಸಾಹಸಮಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ತರಬೇತಿ ಪಡೆದ ಎಲ್ಲಾ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿ ಕಲಿಕೆಯೊಂದಿಗೆ ಅವರನ್ನು ದೇಶದ ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಶ್ರಮಿಸಬೇಕು ಎಂದರು.
ಜಿಲ್ಲಾ ಸ್ಕೌಟ್ಸ್ ವಿಭಾಗದ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿ, ತರಬೇತಿ ಪಡೆದ ಶಿಕ್ಷಕರು ತಮ್ಮ ಶಾಲಾ ಮಕ್ಕಳಲ್ಲಿ ಸ್ಕೌಟ್ಸ್ , ಗೈಡ್ಸ್ ನ ಧ್ಯೇಯೋದ್ದೇಶಗಳ ಬಗ್ಗೆ ಅರಿವು ಮೂಡಿಸಿ ಅವರಲ್ಲಿ ಜೀವನ ಕೌಶಲ್ಯ ಹಾಗೂ ಉತ್ತಮ ನಾಯಕತ್ವ ಬೆಳೆಸಲು ವಿಶೇಷ ಗಮನಹರಿಸಬೇಕು ಎಂದರು.
ಸಂಸ್ಥೆಯ ಸ್ಥಾನೀಕ ಆಯುಕ್ತ ಜಿಲ್ಲಾ ಗೈಡ್ಸ್ ಸಂಸ್ಥೆಯ ಆಯುಕ್ತೆಯೂ ಆಗಿರುವ ಪದ್ಮಶ್ರೀ ಪುರಸ್ಕೃತರಾದ ರಾಣಿ ಮಾಚಯ್ಯ,
ಸ್ಥಾನಿಕ ಆಯುಕ್ತ ಎಚ್.ಆರ್.ಮುತ್ತಪ್ಪ, ಸಹ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಗೈಡ್ಸ್ ನ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನ, ಸಂಸ್ಥೆಯ ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ ,ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಅಲೀಮ, ಮೈಥಿಲಿರಾವ್, ಉಷಾರಾಣಿ, ಶಿವಶಂಕರಪ್ಪ,ಟಿ.ಬಿ. ಕುಮಾರಸ್ವಾಮಿ, ಕೆ.ಯು.ರಂಜಿತ್, ವಾಮನ, ಸಿ.ಎಂ.ಸುಲೋಚನಾ, ಭೋಜಮ್ಮ, ವೀಣಾ , ಗಣೇಶ್, ಭೀಮಯ್ಯ, ಗ್ರಾ.ಪಂ.ಸದಸ್ಯ ಡೀನ್ ಬೋಪಣ್ಣ, ಸಂಪಾಜೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ. ಧನಂಜಯ, ಇತರರು ಇದ್ದರು.