ಮಡಿಕೇರಿ ಜೂ.26 NEWS DESK : ಕೊಡಗಿನ ಹಾಕಿಯ ಪಿತಾಮಹ ಎಂದೆ ಹೆಸರಾದ ಶಂಕರ ಸ್ವಾಮಿ ಅವರ ಗರಡಿಯಲ್ಲಿ ಪಳಗಿದ ಅದೆಷ್ಟೋ ಆಟಗಾರರು ಬಾನಿನಲ್ಲಿ ನಕ್ಷತ್ರಗಳಿದ್ದಂತೆ, ಅವರ ಲೆಕ್ಕ ಸಿಕ್ಕುವುದಿಲ್ಲ. ಇವರ ಲೇಖನದಲ್ಲಿ “ಮುದ್ದಯ್ಯ ಒಬ್ಬ ಅದ್ಭುತ ಆಟಗಾರ ಹಾಗೂ ತರಬೇತಿದಾರನಾಗಬಹುದು ಹಾಗೂ ತಾನು ಹುಟ್ಟು ಹಾಕಿದ ವಾಂಡರರ್ಸ್ ಸಂಸ್ಥೆಯನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಆಟಗಾರನಾಗುತ್ತಾನೆ” ಎಂದು ಕಾಫಿ ಲ್ಯಾಂಡ್ ಪತ್ರಿಕೆಯಲ್ಲಿ ಕೆಲವು ವರ್ಷಗಳ ಹಿಂದೆ ಮುನ್ನುಡಿ ಬರೆದಿದ್ದರು.
ಕೊಡಗಿನ ಕೋಟೇರ ನಂಜುಂಡ ಹಾಗೂ ಕಾಮವ್ವ (ತಾಮನೆ ಕೀತಿಯಂಡ) ದಂಪತಿಯರ ಪುತ್ರನಾಗಿ ಮುದ್ದಯ್ಯನವರು 5 ಏಪ್ರಿಲ್ 1949 ರಲ್ಲಿ ಜನಿಸಿದರು. ಇವರ ತಂದೆ ನಿವೃತ್ತ ಅಸಿಸ್ಟೆಂಟ್ ಕಮಿಷನರ್.
ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಡಿಕೇರಿಯ ಸೆಂಟ್ರಲ್ ಹೈಸ್ಕೂಲ್ ನಲ್ಲಿ ಪಡೆದರು.
:: ಅದ್ಭುತ ಕಲೆ :: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗ ಮೈಸೂರು ವಿಶ್ವವಿದ್ಯಾನಿಲಯವನ್ನು 3 ವರ್ಷಗಳ ಕಾಲ ಪ್ರತಿನಿಧಿಸಿದ್ದರು. ಪೂನಾದ ವಿರುದ್ಧ ನಡೆದ ಅಂತರ ವಿಶ್ವವಿದ್ಯಾನಿಲಯಗಳ ಪಂದ್ಯಾವಳಿಯಲ್ಲಿ 5 ಮೀಟರ್ ಜಿಗಿದು ಗೋಲು ಬಚಾವು ಮಾಡಿದ್ದು ದಾಖಲೆಯೇ ಸರಿ. ಕಲ್ಕತ್ತಾ ಲೀಗ್ ನಲ್ಲಿ 2 ವರ್ಷ ಆಡಿದರು.
:: ಮದ್ರಾಸ್ ನಲ್ಲಿ ಕೈಚಳಕ :: ಕೊಡಗಿನ ಖ್ಯಾತ ಆಟಗಾರರಾದ ಲೆಫ್ಟ್ ಹಾಫ್ ಮಕೇರೀರ ವಿಶ್ವನಾಥ್, ರೈಟ್ ಹಾಫ್ ಬಾಲ್ಯಾಟಂಡ ಪಾರ್ಥ ಚಂಗಪ್ಪ, ಸೆಂಟರ್ ಹಾಫ್ ಮುದ್ದು, ಈ ತ್ರಿಮೂರ್ತಿಗಳು ಮದ್ರಾಸ್ ನಲ್ಲಿ ಹಾಕಿಯ ಪ್ರಾಬಲ್ಯವನ್ನು ಮರೆದರು. ಈ ಮೂವರ ಆಟ ಬಹಳಷ್ಟು ಹೆಸರು ಮಾಡಿದ್ದು ಇಂಡಿಯನ್ ಓವರ್ ಸೀಸ್ ಬ್ಯಾಂಕಿಗೆ. ಒಲಂಪಿಯನ್ ಕೃಷ್ಣಮೂರ್ತಿ, ಬಿ ಪಿ ಗೋವಿಂದ, ಮೊಣ್ಣಪ್ಪ ಇವರುಗಳ ಜೊತೆ ಆಡಲು ಅವಕಾಶ ಸಿಕ್ಕಿತು. ರಾಜ್ಯ ತಂಡದಲ್ಲಿ ಶ್ರೀಲಂಕಾ ಪ್ರವಾಸವನ್ನು ಕೂಡ ಮಾಡಿದರು. ಈ ಮೂವರಿಂದ ಮದ್ರಾಸ್ ನಲ್ಲಿ ಕೊಡಗಿನ ಹಾಕಿ ಆಟಗಾರರಿಗೆ ಬೇಡಿಕೆ ಹೆಚ್ಚಿತ್ತು.
:: ಮದ್ರಾಸ್ ನಲ್ಲಿ ಪ್ರಾಬಲ್ಯತೆ :: ಮುದ್ದು ಅವರು ಐ.ಒ.ಬಿ ತಂಡಕ್ಕೆ ಆಡುತ್ತಾ, ಚೆನ್ನೈನ ಎಗ್ಮೋರ್ ಮೈದಾನದಲ್ಲಿ ನಡೆದ ಪ್ರಖ್ಯಾತ ಆಲ್ ಇಂಡಿಯಾ ಮುರುಗಪ್ಪ ಗೋಲ್ಡ್ ಕಪ್ ಹಾಗೂ ಬೆಂಗಳೂರಿನ ಸುಲೇವನ್ ಹಾಕಿ ಮೈದಾನದಲ್ಲಿ ನಡೆದ ಮಹಾರಾಜ ಗೋಲ್ಡ್ ಕಪ್ ನಲ್ಲಿ ಆಡಿ ಹೆಸರು ಗಳಿಸಿದರು. ಇವರ ತರಬೇತಿಯಲ್ಲಿ ಐ.ಒ.ಬಿ ತಂಡವು 6 ವರ್ಷಗಳ ಕಾಲ ಪ್ರತಿಷ್ಠಿತ ಚೆನ್ನೈ ಸೂಪರ್ ಲೀಗ್ ನ ವಿಜಯಶಾಲಿಗಳಾಗಿದ್ದರು. ಈ ಪಂದ್ಯಾವಳಿಗಳಾದ ನಂತರ ಇವರ ತಂಡವನ್ನು ಭಾರತದಾದ್ಯಂತ ಆಡಲು ಆಹ್ವಾನಿಸಲಾಯಿತು.
::ಜೀವ ತುಂಬಿದ ಮ್ಯಾನ್ಸ್ ಕಾಂಪೌಂಡ್ :: ಮುದ್ದಣ್ಣನವರು ಮೈಸೂರಿನಲ್ಲಿ ವಾಸಿಸುತ್ತಿದ್ದು ಸಾಯಂಕಾಲ ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಪ್ರತ್ಯಕ್ಷರಾಗಿ ಅಲ್ಲಿನ ಮಕ್ಕಳಿಗೆ ಹಾಕಿ ತರಬೇತಿ ನೀಡುತ್ತಾರೆ. ಮಡಿಕೇರಿಗೆ ಬಂದಾಗಲೂ ಸಹ ಕೊಡಗು ವಿದ್ಯಾಲಯಕ್ಕೆ ತರಬೇತಿ ನೀಡಲು ಮುಂದಾಗುತ್ತಾರೆ. ವಾಂಡರರ್ಸ್ ತಂಡಕ್ಕೆ ಬೇಸಿಗೆ ಶಿಬಿರದಲ್ಲಿ ತರಬೇತಿ ನೀಡಲು ಹೋಗುತ್ತಾರೆ. ತನ್ನ ಸಹಪಾಠಿಗಳಾದ ಬಾಬು ಸೋಮಯ್ಯ, ನಾಣಿ, ವೆಂಕಟೇಶ್, ಸಂತೋಷ್, ಲೋಕೇಶ್, ಶ್ಯಾಮ್, ಹರೀಂದ್ರ, ಗಣೇಶ್, ಮಹೇಶ್ ಹಾಗು ಜನಾರ್ಧನ್ ಅವರನ್ನು ಕೂಡ ತರಬೇತಿ ನೀಡುವಂತೆ ಹುರಿದುಂಬಿಸುತ್ತಾರೆ.
:: ವಾಂಡರರ್ಸ್ ಹಾಕಿ ಸಂಸ್ಥೆ :: ವಾಂಡರರ್ಸ್ ಹಾಕಿ ಕ್ಲಬ್ ದಕ್ಷಿಣ ಭಾರತದಲ್ಲೇ ಅತೀ ಪುರಾತನವಾದ ಹಾಕಿ ಸಂಸ್ಥೆಯಾಗಿದ್ದು, ಬಹಳಷ್ಟು ಒಲಂಪಿಕ್ಸ್ ಹಾಗು ವಿಶ್ವಕಪ್ ವಿಜೇತ ಅಂತರಾಷ್ಟ್ರೀಯ ಆಟಗಾರರನ್ನು ಕೊಟ್ಟ ಈ ಸಂಸ್ಥೆಯು ಇಂದು ಕೂಡ ಜೀವಂತವಾಗಿ ತನ್ನ ಕಾರ್ಯ ನಿರ್ವಹಿಸುತ್ತಿದೆ.
ಇಳಿ ವಯಸ್ಸಿನಲ್ಲೂ ಯುವಕ ಮುದ್ದು ಅವರು ತಮ್ಮ 75 ನೇ ಇಳಿ ವಯಸ್ಸಿನಲ್ಲೂ ಅವರಿಗೆ ಪಾಠ ಕಲಿಸಿದ ವಾಂಡರರ್ಸ್ ಹಾಕಿ ಸಂಸ್ಥೆಯ ಅಧ್ಯಕ್ಷರಾಗಿ ಅದನ್ನು ಮುನ್ನಡೆಸಲು ಬಹಳಷ್ಟು ಪ್ರಯತ್ನಪಡುತ್ತಿದ್ದು, ಅಲ್ಲಿಂದ ಆಟ ಕಲಿತು ಹೋದ ಆಟಗಾರರೆಲ್ಲ ಕೈಜೋಡಿಸಿದರೆ ಹಿಂದೆ ಇದ್ದಂತಹ ವಾಂಡರರ್ಸ್ ಸಂಸ್ಥೆಯ ಗತವೈಭವ ಮತ್ತೆ ಮರುಕಳಿಸುತ್ತದೆ ಎಂಬುದು ಇವರ ಚಿಂತನೆ. ಇದು ಸತ್ಯವಲ್ಲವೇ ?
:: ಕುಟುಂಬವೇ ಹಾಕಿ ಆಟಗಾರರು :: ಅವರ ಅಣ್ಣ ಕೋಟೇರ ಸುಬ್ಬಯ್ಯ (ಬೊಳ್ಳು) ಕ್ರಿಕೆಟ್ ಹಾಗೂ ಹಾಕಿ ಆಡುತ್ತಲೇ ಬೆಳೆದರು. ಎಸ್.ಬಿ.ಐ ನಲ್ಲಿ ಹಾಕಿ ಆಟಗಾರನಾಗಿ ಒಳ್ಳೆಯ ಹೆಸರು ಮಾಡಿದರು ಹಾಗು ಅಧಿಕಾರಿಯಾಗಿ ನಿವೃತ್ತಿ ಪಡೆದರು.
ಇವರ ಮತ್ತೊಬ್ಬ ಸಹೋದರ ದಿವಂಗತ ಕೋಟೇರ ನರೇನ್ ಕುಶಾಲಪ್ಪ ಒಳ್ಳೆಯ ಕ್ರಿಕೆಟ್ ಹಾಗೂ ಹಾಕಿ ಆಟಗಾರ. ಸೆಂಟ್ರಲ್ ಎಕ್ಸರ್ಸೈಜ್ ಹಾಗು ಕಸ್ಟಮ್ಸ್ ನಲ್ಲಿ ಹಾಕಿ ಆಡುತ್ತಾ, ಅಸಿಸ್ಟೆಂಟ್ ಕಮಿಷನರ್ ಆಗಿ ನಿವೃತ್ತಿ ಪಡೆದರು.
:: ಮುದ್ದು ಅವರ ವ್ಯಕ್ತಿತ್ವ :: ಮುದ್ದಣ್ಣನವರು ಹಾಕಿ ಕೂರ್ಗ್ ನ ಸ್ಥಾಪಕ ಸದಸ್ಯ, ಹಾಕಿ ಮೈಸೂರಿನ ಉಪಾಧ್ಯಕ್ಷ, ಒಳ್ಳೆಯ ಸಂಘಟನೆಗಾರ, ಇತ್ತೀಚೆಗಷ್ಟೇ ಮೈಸೂರಿನಲ್ಲಿ ಅದ್ಭುತ ಹಾಕಿ ಪಂದ್ಯಾವಳಿಯನ್ನು ಅಧ್ಯಕ್ಷ ಕೊಂಗಂಡ ದಿಲೀಪ್ ಹಾಗೂ ಕೋದಂಡ ಸತೀಶ್ ಇವರುಗಳ ತಂಡದೊಡನೆ ಸೇರಿ ನಡೆಸಿ ತೋರಿಸಿದರು. ಸದಾ ಸನ್ಮುಖಿ, ಎಲ್ಲರೊಡನೆ ಬರೆಯುವ ಸ್ನೇಹಜೀವಿ, ಇಂದಿಗೂ ಕೂಡ ಕೊಡಗಿಗೆ ಬಂದಾಗ ಎಲ್ಲಿ ಹಾಕಿ ಶಿಬಿರ ನಡೆಯುತ್ತದೋ ಅಲ್ಲಿ ಬಂದು ಮಕ್ಕಳಿಗೆ ಹಾಕಿಯ ಬಗ್ಗೆ ತಿಳುವಳಿಕೆ ಕೊಡುವುದು ಬಹಳಷ್ಟು ರೂಢಿ, ತಮಿಳುನಾಡಿನಲ್ಲಿ ಖ್ಯಾತ ತರಬೇತಿದಾರನಾಗಿ ಹೆಸರು ಮಾಡಿದರು. 36 ವರ್ಷಗಳ ಕಾಲ I.O.B ಯಲ್ಲಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದರು.
ಪ್ರಸ್ತುತ ಇವರ ಪತ್ನಿ ಗೀತಾ (ತಾಮನೆ ಅಜ್ಜಿಕುಟ್ಟೀರ) ಅವರೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದಾರೆ. ಇವರ ಒಬ್ಬಳೇ ಮಗಳಾದ ವರ್ಷ ಕಾವೇರಿ ಅವರ ಮದುವೆ ಇತ್ತೀಚೆಗಷ್ಟೇ ಕೊರವಂಡ ಹೇಮಂತ್ ಮಂದಪ್ಪ ಅವರೊಂದಿಗೆ ಮೈಸೂರಿನಲ್ಲಿ ನಡೆಯಿತು. ಮುದ್ದಣ್ಣ ಅವರ ಮೇಲೆ ಇದ್ದ ಪ್ರೀತಿಗೆ ಕರ್ನಾಟಕದ ಹಾಕಿ ಕಲಿಗಳು ಇಲ್ಲಿ ಬಂದು ಸೇರಿದ್ದು ಎಲ್ಲರಿಗೂ ಸಂಭ್ರಮ ತರಿಸಿತ್ತು.
:: ಸ್ನೇಹಿತರ ಅನಿಸಿಕೆ :: ಚಿಕ್ಕ ವಯಸ್ಸಿನಿಂದಲೇ ಹಾಕಿಯಲ್ಲಿ ಸಾಧನೆ ಮಾಡುತ್ತಾ, ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿ, ಇಂದಿಗೂ ಹಾಕಿಗೆ ಸೇವೆ ಸಲ್ಲಿಸುತ್ತಿರುವ ಇವರು, ತನ್ನ ನೆಚ್ಚಿನ ಗುರು ಶಂಕರ್ ಸ್ವಾಮಿಯವರು ಹಾಕಿಕೊಟ್ಟ ದಾರಿಯಲ್ಲೇ, ಅವರು ಬಿತ್ತಿದ ವಾಂಡರರ್ಸ್ ಸಂಸ್ಥೆ ಎಂಬ ಹಾಕಿ ಬೀಜ ಇಂದು ಹೆಮ್ಮರವಾಗಿ ಜಾತಿ-ಮತ-ಭೇದವಿಲ್ಲದೆ ಹಾಕಿ ಕ್ರೀಡೆಯನ್ನು ಜೀವಂತವಾಗಿರಿಸಿದ್ದು, ಅದನ್ನು ಮುನ್ನಡೆಸುತ್ತಾ ಬರುತ್ತಿದ್ದಾರೆ. ಇವರ ಈ ವ್ಯಕ್ತಿತ್ವ ಯುವ ಆಟಗಾರರಿಗೆ ಪ್ರೇರಣೆಯಾಗಲಿ, ಮುದ್ದಣ್ಣ ಅವರಿಗೆ ಶುಭವಾಗಲಿ.
ಕ್ರೀಡಾ ವಿಶ್ಲೇಷಣೆ :: ಚೆಪ್ಪುಡೀರ ಕಾರ್ಯಪ್ಪ