ಮಡಿಕೇರಿ ಜೂ.26 NEWS DESK : ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ಸಂದರ್ಭ ಪ್ರತಿಕೃತಿ ದಹಿಸಿರುವುದಕ್ಕೆ ಬೇಸರಗೊಂಡು ಜನರೇ ನನ್ನ ಪರ ಸ್ವಯಂ ಪ್ರೇರಿತರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿ ಮಾಡುತ್ತಿರುವ ಆರೋಪದಂತೆ ಪ್ರತಿಕ್ರಿಯೆ ನೀಡಲು ನಾನು ಹೇಳಿರುವುದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಲೆ ಏರಿಕೆಯನ್ನು ವಿರೋಧಿಸಿ ರಾಜ್ಯವ್ಯಾಪಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಆದರೆ ವಿರಾಜಪೇಟೆಯಲ್ಲಿ ಬಿಜೆಪಿಯ ಪ್ರತಿಭಟನೆ ಹಾದಿ ತಪ್ಪಿದೆ. ರಾಜ್ಯದ ಎಲ್ಲೂ ಪ್ರತಿಕೃತಿಯನ್ನು ದಹಿಸಿಲ್ಲ, ಸೈಕಲ್ ತುಳಿದಿದ್ದಾರೆ, ವಿರಾಜಪೇಟೆಯಲ್ಲಿ ಮಾತ್ರ ಪ್ರತಿಕೃತಿ ದಹಿಸಲಾಗಿದೆ. ಇದು ಸಹಜವಾಗಿಯೇ ಜನರ ಬೇಸರಕ್ಕೆ ಕಾರಣವಾಗಿದ್ದು, ಸ್ವಯಂ ಪ್ರೇರಣೆಯಿಂದ ನನ್ನ ಪರ ಧ್ವನಿ ಎತ್ತಿದ್ದಾರೆ. ಆದರೆ ಬಿಜೆಪಿಯವರ ಸರಣಿ ಹೇಳಿಕೆಗಳು ಬಿಜೆಪಿಯ ನಾಯಕರೇ ಹೇಳಿ ಮಾಡಿಸಿದ್ದಾಗಿದೆ ಎಂದರು.
ಪಕ್ಷಾತೀತ, ಜಾತ್ಯತೀತ ಮತ್ತು ಧರ್ಮಾತೀತವಾಗಿ ಸಾಮಾಜಿಕ ಕಳಕಳಿಯಿಂದ ಜನಸೇವೆ ಮಾಡುತ್ತಾ ಬಂದವನು ನಾನು. ಅಭಿವೃದ್ಧಿ ಕಾರ್ಯಗಳ ಮೂಲಕ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಿಂದ ಜನರ ಪ್ರೀತಿ ಗಳಿಸಿದ್ದೇನೆ. ಪ್ರತಿಕೃತಿ ದಹಿಸಿದ ಬಿಜೆಪಿಯ ನಡೆಯನ್ನು ಇದೇ ಕಾರಣಕ್ಕೆ ಇಂದು ಜನ ನನ್ನ ಮೇಲಿನ ಅಭಿಮಾನದಿಂದ ಖಂಡಿಸುತ್ತಿದ್ದಾರೆ. ಕೊಡವರು ಮಾತ್ರವಲ್ಲದೆ ಅಲ್ಪಸಂಖ್ಯಾತರು, ಪರಿಶಿಷ್ಟರು, ಆದಿವಾಸಿಗಳು, ಬಿಜೆಪಿಯವರು ಸೇರಿದಂತೆ ಎಲ್ಲಾ ಸಮುದಾಯದವರು ನನ್ನ ಬಗ್ಗೆ ಅನುಕಂಪ ವ್ಯಕ್ತಪಡಿಸಿ ಮಾತನಾಡುತ್ತಿದ್ದಾರೆ. ಇದನ್ನು ಬಿಜೆಪಿ ಅರ್ಥ ಮಾಡಿಕೊಂಡಿಲ್ಲ ಎಂದು ಅಭಿಪ್ರಾಯಪಟ್ಟರು. ಜನರು ನೀಡುತ್ತಿರುವ ಪ್ರತಿಕ್ರಿಯೆಯಲ್ಲಿ ನನ್ನ ಪಾತ್ರವಿಲ್ಲ, ಕೊಡವ ಪದ್ಧತಿಯಲ್ಲಿ ಶವಯಾತ್ರೆ ಮಾಡಿ ಪ್ರತಿಕೃತಿ ದಹಿಸುವಂತ್ತಿಲ್ಲ. ಕೊಡವ ಸಮಾಜಗಳ ಒಕ್ಕೂಟ ಮತ್ತು ಅಖಿಲ ಕೊಡವ ಸಮಾಜದಲ್ಲಿರುವವರೆಲ್ಲರೂ ಕಾಂಗ್ರೆಸ್ಸಿನವರಲ್ಲ. ಅವರವರ ಭಾವನೆಗೆ ತಕ್ಕ ಹಾಗೆ ನನ್ನ ಪರ ಧ್ವನಿ ಎತ್ತಿದ್ದಾರೆ. ಜನರ ಭಾವನೆಯನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕಾಗಿತ್ತು ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯನ್ನು ನಾನು ಸ್ವಾಗತಿಸುತ್ತೇನೆ, ಆದರೆ ವಿರಾಜಪೇಟೆಯಲ್ಲಿ ಬಿಜೆಪಿ ಮಾಡಿದ ಪ್ರತಿಭಟನೆ ದಾರಿ ತಪ್ಪಿದೆ. ಹೊಸ ನಾಯಕತ್ವಕ್ಕೆ ಬೆಂಬಲ ನೀಡಿ ಎಂದು ಜನರ ಬಳಿ ಮನವಿ ಮಾಡಿ, ಪ್ರೀತಿ ಗಳಿಸಿ ಗೆದ್ದು ಬಂದಿದ್ದೇನೆಯೇ ಹೊರತು ಹಿಂಬಾಗಿನಿಂದ ಹೋಗಿಲ್ಲ. ಜಿಲ್ಲೆಯಲ್ಲಿ ಕೆಲವು ಮಂದಿಯ ಬಳಿ ಮಾತ್ರ ನಾಯಕತ್ವ ಉಳಿಯಬೇಕೆ, ಹೊಸ ನಾಯಕತ್ವ ಬರಬಾರದೆ ಎಂದು ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆ ಪ್ರತಿಕೃತಿ ದಹಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾನು ಮಾತನಾಡುವುದಿಲ್ಲ, ಯಾಕೆಂದರೆ ಇಂದು ಜನ ಇಂದಿನ ಸಂದರ್ಭ ಮತ್ತು ಭಾವನೆಗೆ ಅನುಗುಣವಾಗಿ, ನನ್ನ ಮೇಲಿನ ಪ್ರೀತಿಯಿಂದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ನಾನು ದ್ವೇಷದ ರಾಜಕಾರಣ ಮಾಡುವವನಲ್ಲ, ಈ ಹಿಂದೆ ಯರ‍್ಯಾರು ಯಾವೆಲ್ಲ ಹಗರಣ ಮಾಡಿದ್ದಾರೆ, ಭೂಕಬಳಿಕೆ ಮಾಡಿದ್ದಾರೆ, ಭ್ರಷ್ಟಾಚಾರ ಮಾಡಿದ್ದಾರೆ, ಜೈಲಿಗೆ ಹೋಗುವುದರಿಂದ ಹೇಗೆ ತಪ್ಪಿಸಿಕೊಂಡಿದ್ದಾರೆ ಎನ್ನುವುದು ತಿಳಿದಿದೆ. ಆದರೆ ನಾನು ಈ ಪ್ರಕರಣಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಯಾರಿಗೂ ಕೆಡುಕು ಬಯಸುವವನು ನಾನಲ್ಲ, ಜನರೇ ಅವರಿಗೆ ಈಗಾಗಲೇ ರಾಜಕೀಯ ಶಿಕ್ಷೆಯನ್ನು ನೀಡಿ ಆಗಿದೆ ಎಂದು ಪೊನ್ನಣ್ಣ ಆರೋಪಿಸಿದರು. ವಿರಾಜಪೇಟೆಯಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿಯಿಂದ ಪೊಲೀಸರೇ ಸ್ವಯಂ ಪ್ರೇರಣೆಯಿಂದ ಬಿಜೆಪಿಯವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನಾತ್ಮಕವಾಗಿ ಈ ಪ್ರಕರಣವನ್ನು ಮುಕ್ತಾಯಗೊಳಿಸಬೇಕೆಂದು ಮನವಿ ಮಾಡುವುದಾಗಿ ಹೇಳಿದರು. ನಾನೇನು ಸರ್ವಜ್ಞನಲ್ಲ, ನಾನೇದರು ತಪ್ಪು ಮಾಡಿದ್ದರೆ ತಿದ್ದಿ ನಡೆದುಕೊಳ್ಳುವೆ, ಸಮಾಜಕ್ಕೆ ಒಳೆಯದನ್ನು ಮಾಡುವೆ. ಮಾಜಿ ಶಾಸಕರುಗಳು ಹಿರಿಯರಿದ್ದಾರೆ, ಅವರುಗಳ ಸಲಹೆಯನ್ನು ಸ್ವೀಕಾರ ಮಾಡುತ್ತೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ, ಚೆಪ್ಪುಡಿರ ಅರುಣ್ ಮಾಚಯ್ಯ, ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ಹಾಗೂ ಕೆಪಿಸಿಸಿ ಸದಸ್ಯ ಬಿ.ಎಸ್.ರಮಾನಾಥ್ ಉಪಸ್ಥಿತರಿದ್ದರು.
Breaking News
- *ಹೊದ್ದೂರಿನ ಕಬಳಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*
- *ದೇಶ ದ್ರೋಹದ ಪ್ರಕರಣ ದಾಖಲಿಸಲು ಕೆ.ಜಿ.ಬೋಪಯ್ಯ ಆಗ್ರಹ*
- *ಬಿಜೆಪಿ, ಜೆಡಿಎಸ್ ಗೆ ಜನ ತಕ್ಕ ಪಾಠ ಕಲಿಸಿದ್ದಾರೆ : ಎಂ.ಎ.ಕಲೀಲ್ ಬಾಷ*
- *ಕೆವಿ ಎನ್ಸಿಸಿ ಕೆಡೆಟ್ ಗಳಿಂದ ಕಾಯ೯ಪ್ಪ ಪ್ರತಿಮೆ ಸ್ವಚ್ಛತೆ*
- *ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*
- *ಕರ್ನಾಟಕ ಉಪ ಚುನಾವಣೆ : ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ*
- *ಮಿಸ್ಟಿ ಹಿಲ್ಸ್ ನಿಂದ ಮಕ್ಕಳಿಗೆ ಸಾಹಸಕ್ರೀಡೆ*
- *ವಿಟಿಯು ರಾಜ್ಯಮಟ್ಟದ ಕಬಡ್ಡಿ : ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ*