ಮಡಿಕೇರಿ ಜೂ.29 NEWS DESK : ವಿದ್ಯಾರ್ಥಿಗಳು ಮೌಲ್ಯಯುತವಾದ ಶಿಕ್ಷಣವನ್ನು ಪಡೆದು ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದು ಚೆಟ್ಟಳ್ಳಿ ಗ್ರಾ.ಪಂ ಸದಸ್ಯ ಸಿ.ಇ.ತೀರ್ಥಕುಮಾರ್ (ಮೂಡಳ್ಳಿ ರವಿ) ಹೇಳಿದರು.
ಗಾಂಧಿ ಯುವಕ ಸಂಘದ ವತಿಯಿಂದ ಕಂಡಕರೆ ವತಿಯಿಂದ ಕಂಡಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಬಹುತೇಕರಿಗೆ ಇಂಗ್ಲಿಷ್ ವ್ಯಾಮೋಹದಿಂದ ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಉಂಟಾಗಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಕಂಡಕರೆಯ ಗಾಂಧಿ ಯುವಕ ಸಂಘವು ಸಾಮಾಜಿಕ ಚಟುವಟಿಕೆಗಳ ಮೂಲಕ ಸ್ಥಳೀಯ ಸರ್ಕಾರಿ ಶಾಲೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದರು.
ಕಳೆದ ವರ್ಷ ಗಾಂಧಿ ಯುವಕ ಸಂಘದ ವತಿಯಿಂದ ಕಂಡಕರೆ ಶಾಲೆಗೆ ಉಚಿತವಾಗಿ 25 ಕುರ್ಚಿಗಳನ್ನು ನೀಡಿ ಎಲ್ಲರಿಗೂ ಮಾದರಿಯಾಗಿದ್ದರು. ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ನೀಡಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ.
ಗ್ರಾ.ಪಂ ಹಾಗೂ ಸರ್ಕಾರದ ಮಟ್ಟದಿಂದ ಶಾಲಾ ಅಭಿವೃದ್ಧಿ ಕೆಲಸಗಳಿಗೆ ಬೇಕಾದ ಅನುದಾನವನ್ನು ಒದಗಿಸಲು ಶಾಸಕರ ಗಮನಸೆಳೆಯುವುದಾಗಿ ತೀರ್ಥಕುಮಾರ್ ಭರವಸೆ ನೀಡಿದರು.
ಗಾಂಧಿ ಯುವಕ ಸಂಘದ ಸ್ಥಾಪಕ ಇಸ್ಮಾಯಿಲ್ ಕಂಡಕರೆ ಮಾತಾನಾಡಿ, ಕಂಡಕರೆ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಸಂಘದಿಂದ ಹಲವಾರು ಯೋಜನೆಗಳನ್ನು ನಾವು ಕೈಗೊಂಡಿದ್ದೇವೆ. ಶಿಕ್ಷಕರು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿ ಶಾಲೆಯ ಯೋಜನೆಗಳಿಗೆ ಗಾಂಧಿ ಯುವಕ ಸಂಘದ ವತಿಯಿಂದ ಎಲ್ಲಾ ರೀತಿಯ ಆರ್ಥಿಕ ಸಹಕಾರ ನೀಡುವುದಾಗಿ ಇಸ್ಮಾಯಿಲ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಧನುಪ್ರಕಾಶ್, ಕಳೆದ ವರ್ಷ ನಾವು ಕೇಳಿದ ತಕ್ಷಣ ಇಸ್ಮಾಯಿಲ್ ಕಂಡಕರೆ ನೇತೃತ್ವದ ಗಾಂಧಿ ಯುವಕ ಸಂಘವು ಶಾಲೆಗೆ ಬೇಕಾದ 25ಕುರ್ಚಿಗಳನ್ನು ನೀಡಿದ್ದರು.ಇದೀಗ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕವನ್ನು ನೀಡಿ ಶಾಲೆಯೊಂದಿಗೆ ಕೈ ಜೋಡಿಸಿದ್ದಾರೆ. ಗಾಂಧಿ ಯುವಕ ಸಂಘದ ಬಹುತೇಕ ಸದಸ್ಯರು ಕಂಡಕರೆ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಾಗಿದ್ದಾರೆ. ತಾವು ಕಲಿತ ಶಾಲೆಗೆ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಈ ಸಂದರ್ಭ ಗಾಂಧಿ ಯುವಕ ಸಂಘದ ಹಿರಿಯ ಉಪಾಧ್ಯಕ್ಷ ಸವಾದ್ ಉಸ್ಮಾನ್, ಕಾರ್ಯದರ್ಶಿ ಕೆ.ಜೆ.ಶಿಬಿಲ್, ಶಿಕ್ಷಕರಾದ ಸುಜಿತ್, ವಿನೋದ ಇದ್ದರು. ಕಾರ್ಯಕ್ರಮವನ್ನು ಸಹಶಿಕ್ಷಕ ರತೀಶ್ ಟಿ.ಎನ್ ಸ್ವಾಗತಿಸಿ, ನಿರೂಪಿಸಿದರು.