ಪಂಚ ದ್ರಾವಿಡ ಭಾಷೆಯಲ್ಲೇ ಅತಿ ಪುರಾತನ ಭಾಷೆಯಾಗಿರುವ ತುಳುವಿಗೆ 2600 ವರ್ಷಗಳ ಇತಿಹಾಸವಿದ್ದು, ಸ್ವಂತ ಲಿಪಿಯನ್ನು ಹೊಂದಿದೆ. ಜೂನ್ 27ರಂದು ಜಾಗತಿಕವಾಗಿ ತುಳು ಭಾಷೆಯನ್ನು ಗೂಗಲ್ ಸಂಸ್ಥೆಯು ತನ್ನ ಟ್ರಾನ್ಸ್ ಲೇಟರ್ ನಲ್ಲಿ ಸೇರ್ಪಡೆ ಮಾಡಿದ್ದು, ಇಂಗ್ಲೀಷ್ ಅಥವಾ ಯಾವುದೇ ಭಾಷೆಯ ಪದಗಳನ್ನು ಉಲ್ಲೇಖಿಸಿ ತುಳುವಿನಲ್ಲಿ ಅರ್ಥ ಕೇಳಿದರೆ ಅದಕ್ಕೆ ಸರಿಯಾದ ಅರ್ಥ ಕೊಡಬಲ್ಲ ಪದಗಳನ್ನು ತೋರಿಸುತ್ತದೆ.
ತುಳು ಮಾತನಾಡುವ ಕರಾವಳಿ ಜನರು ಇಡೀ ಜಗತ್ತಿನಲ್ಲಿದ್ದಾರೆ. ತುಳು ಪ್ರಾದೇಶಿಕ ಭಾಷೆಯಾಗಿದ್ದರು ಹೆಚ್ಚಿನ ಮಂದಿ ತುಳುವನ್ನು ತಮ್ಮ ಮಾತೃಭಾಷೆಯನ್ನಾಗಿ ಬಳಸುತ್ತಿದ್ದಾರೆ. ಈಗ ಗೂಗಲ್ ಇಂಜಿನ್ ನಲ್ಲಿ ತುಳು ಭಾಷೆ ಸೇರ್ಪಡೆಯಾಗಿರುವುದು ತುಳುವಿನ ಮಟ್ಟಿಗೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ.
ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತ ವ್ಯಕ್ತಿಯು ಗೂಗಲ್ ಇಂಜಿನ್ ನಲ್ಲಿರುವ ಇತರ ಭಾಷೆಯ ಪದಗಳಿಗೆ ತುಳುವಿನಲ್ಲಿ ಅರ್ಥ ತಿಳಿದುಕೊಳ್ಳಬಹುದು. ಕಳೆದ ಹಲವು ವರ್ಷಗಳಿಂದ ತುಳು ಭಾಷೆ ವಿಕಿ ಪೀಡಿಯಾದಲ್ಲಿರುವುದರಿಂದ ಗೂಗಲ್ ಇಂಜಿನ್ ಸ್ವೀಕರಿಸುವಲ್ಲಿ ಮಹತ್ವದ ಕೊಡುಗೆ ನೀಡಿದೆ.
ತುಳು ವಿಕಿಪೀಡಿಯಾದಲ್ಲಿ 2000ಕ್ಕೂ ಹೆಚ್ಚು ಲೇಖನ ಬರಹಗಳು ಸೇರ್ಪಡೆಗೊಂಡಿದ್ದು, ತುಳು ಭಾಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಳಸಿದಷ್ಟು ಗೂಗಲ್ ಇಂಜಿನ್ ಗೆ ಹತ್ತಿರವಾಗಲಿದೆ. ಗೂಗಲ್ ಟ್ರಾನ್ಸ್ ಲೇಟರ್ ನಲ್ಲಿ ತುಳು ಭಾಷೆ ಸೇರ್ಪಡೆಯಾಗಿರುವುದರಿಂದ ಜಾಗತಿಕವಾಗಿ ತುಳುವರಿಗೆ ಹಾಗೂ ತುಳು ಭಾಷೆಗೆ ದೊಡ್ಡ ಗೌರವ ಸಿಕ್ಕಿದಂತ್ತಾಗಿದೆ.
ರಾಜ್ಯದ ಅಧಿಕೃತ ಭಾಷೆ ಮತ್ತು ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆ ಸೇರಬೇಕೆಂಬ ತುಳು ಭಾಷಿಕರ ಅನೇಕ ವರ್ಷಗಳ ಕನಸಿಗೆ ಪುಷ್ಟಿ ನೀಡಿದಂತಾಗಿದೆ ಎಂದು ಪಿ.ಎಂ.ರವಿ ಪತ್ರಿಕಾ ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.