ಮಡಿಕೇರಿ ಜು.2 NEWS DESK : ಪ್ರವಾಸೋದ್ಯಮವನ್ನು ಅಭಿವೃದ್ಧಿ ಹಾಗೂ ಪ್ರಚಾರ ಪಡಿಸುವ ಉದ್ದೇಶದಿಂದ ಜಿಲ್ಲೆಯ ಪ್ರವಾಸಿ ತಾಣಗಳ ಐತಿಹಾಸಿಕ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಕಲಾವೈವಿಧ್ಯತೆಗಳನ್ನು ಒಳಗೊಂಡ ಸೃಜನಶೀಲತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದೇಶ/ ವಿದೇಶಿ ಪ್ರವಾಸಿಗರಿಗೆ ನೀಡಲು ಅಂದರೆ ‘ಒಂದು ರಾಜ್ಯ-ಹಲವು ವಿಸ್ಮಯಗಳು’ ಎಂಬುದನ್ನು ಪರಿಚಯಿಸವುದರ ಮೂಲಕ ನಾಡಿನ ಸಮಗ್ರತೆಯ ಬಗ್ಗೆ ವಿವಿಧ ಆಯಾಮಗಳ ಮೂಲಕ ಪ್ರವಾಸಿಗರನ್ನು ನಾಡಿಗೆ ಸೆಳೆಯಲು ಸ್ಥಳೀಯ ಪ್ರವಾಸಿ ಸಂಪನ್ಮೂಲಗಳ ಬಗ್ಗೆ ಜ್ಞಾನ ಮತ್ತು ಅನುಭವವಿರುವ ಪ್ರವಾಸಿ ಮಾರ್ಗದರ್ಶಿಗಳು ಅವಶ್ಯವಾಗಿ ಬೇಕಾಗಿರುವುದರಿಂದ ಜಿಲ್ಲಾ ಪ್ರವಾಸಿ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 21 ರಿಂದ 45 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳಿಂದ ಹಾಗೂ ರಾಜ್ಯ ಪ್ರವಾಸಿ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 21 ರಿಂದ 45 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯೊಂದಿಗೆ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಯ ಪ್ರತಿ, ಪದವಿ ಪೂರ್ವ ಶಿಕ್ಷಣದ ಅಂಕಪಟ್ಟಿಯ ಪ್ರತಿ, ಪದವಿ ಅಂಕಪಟ್ಟಿಯ ಪ್ರತಿ, ಜಾತಿ ಪ್ರಮಾಣ ಪತ್ರದ ಪ್ರತಿ (ತಹಶೀಲ್ದಾರ್/ಉಪ ತಹಶೀಲ್ದಾರ್ ಇವರಿಂದ ಪಡೆದಿರಬೇಕು), ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರದ ಪ್ರತಿ (ತಹಶೀಲ್ದಾರ್/ಉಪ ತಹಶೀಲ್ದಾರ್ ಇವರಿಂದ ಪಡೆದಿರಬೇಕು), ವಾಸಸ್ಥಳ ದೃಡೀಕರಣ ಪತ್ರದ ಪ್ರತಿ (ತಹಶೀಲ್ದಾರ್/ಉಪ ತಹಶೀಲ್ದಾರ್ ಇವರಿಂದ ಪಡೆದಿರಬೇಕು), ನಿರುದ್ಯೋಗಿ ಪ್ರಮಾಣ ಪತ್ರದ ಪ್ರತಿ (ತಹಶೀಲ್ದಾರ್/ಉಪ ತಹಶೀಲ್ದಾರ್ ಇವರಿಂದ ಪಡೆದಿರಬೇಕು), ಆಧಾರ್ ಕಾರ್ಡ್ ಪ್ರತಿ, ಪಾನ್ ಕಾರ್ಡ್ ಪ್ರತಿ, ಚುನಾವಣಾ ಗುರುತಿನ ಚೀಟಿ ಪ್ರತಿ, ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಪ್ರತಿ ಈ ದಾಖಲಾತಿಗಳನ್ನು ಸಲ್ಲಿಸಬೇಕು.
ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ನಿಗಧಿತ ಅರ್ಜಿ ನಮೂನೆಗಳನ್ನು ಉಪ ನಿದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟೀವರ್ಟ್ ಹಿಲ್ ರಸ್ತೆ, ಮಡಿಕೇರಿ, ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜುಲೈ, 31 ರ ಸಂಜೆ 5 ಗಂಟೆಯೊಳಗೆ ಸಲ್ಲಿಸಲು ತಿಳಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ತರಬೇತಿ ನೀಡಲಾಗುವುದು ಹಾಗೂ ತರಬೇತಿಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಮಾರ್ಗದರ್ಶಿ ಗೈಡ್‍ಲೈಸೆನ್ಸ್ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಟ್ ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ 571201 ದೂ.ಸಂ. 08272-200519 ಅಥವಾ ಇ-ಮೇಲ್ ddkodagutourism@gmail.com ಗೆ ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ತಿಳಿಸಿದ್ದಾರೆ.