ಮಡಿಕೇರಿ ಜು.5 NEWS DESK : ಕೊಡವ ಹಾಕಿ ಹಬ್ಬದ ಮೂಲಕವೇ ವಿಶ್ವ ದಾಖಲೆ ಬರೆದಿರುವ ಕೊಡಗು ಜಿಲ್ಲೆ ಕ್ರೀಡಾ ಕಲಿಗಳ ನಾಡೆಂದೇ ಪ್ರಖ್ಯಾತಿ ಪಡೆದಿದೆ. ಆದರೆ ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ನಗರದಲ್ಲಿರುವ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಕಳಂಕ ತರುವಂತ್ತಿದೆ.
ಸುಮಾರು 20 ವರ್ಷಗಳ ಹಿಂದೆ ಯಥಾಸ್ಥಿತಿಯಲ್ಲಿದ್ದ ಮೈದಾನ ಕ್ರೀಡಾಪಟುಗಳ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿತ್ತು. ಈ ಮೈದಾನದಲ್ಲಿ ಆಟವಾಡಿದ ಜಿಲ್ಲೆಯ ಅನೇಕ ಪ್ರತಿಭಾವಂತ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಸುಮಾರು 300 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಹಾಕಿ ಪಂದ್ಯಗಳನ್ನು ಆಡಿದ ಮಾಜಿ ಒಲಂಪಿಯನ್ ಎ.ಬಿ.ಸುಬ್ಬಯ್ಯ ಅವರು ಕೂಡ ಇದೇ ಮೈದಾನದಿಂದ ಅರಳಿದ ಕ್ರೀಡಾ ಪ್ರತಿಭೆಯಾಗಿದ್ದಾರೆ. ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಮಾಜಿ ಒಲಂಪಿಯನ್ ಎಂ.ಎಂ.ಸೋಮಯ್ಯ, ಅಂತರರಾಷ್ಟ್ರೀಯ ಹಾಕಿ ಆಟಗಾರರಾದ ಬಾಳೆಯಡ ಸಿ.ಪೂಣಚ್ಚ, ವಿ.ಎಸ್.ವಿನಯ್ ಸೇರಿದಂತೆ ಅನೇಕ ಆಟಗಾರರಿಗೆ ಇದೇ ಮೈದಾನ ಕ್ರೀಡಾಸ್ಫೂರ್ತಿಯನ್ನು ತುಂಬಿತ್ತು.
ಜಿಲ್ಲೆಯ ಯುವ ಸಮೂಹಕ್ಕೆ ಕ್ರೀಡಾ ತರಬೇತಿ ನೀಡುವ ಮೂಲಕ ಹಲವು ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರಕ್ಕೆ ನೀಡಿದ ಹಿರಿಯ ಕ್ರೀಡಾಪಟು ಸಿ.ವಿ.ಶಂಕರ್ ಅವರು ಕೂಡ ಪ್ರತಿಭೆಗಳ ಅನಾವರಣಕ್ಕೆ ಇದೇ ಮೈದಾನವನ್ನು ವೇದಿಕೆಯನ್ನಾಗಿಸಿಕೊಂಡರು. ಆದರೆ ಇಂದು ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಹೆಸರನ್ನು ಹೊಂದಿರುವ ಜಿಲ್ಲಾ ಕ್ರೀಡಾಂಗಣ ಅವ್ಯವಸ್ಥೆಗಳ ಮೂಲಕವೇ ಕ್ರೀಡಾಪಟುಗಳಲ್ಲಿ ಬೇಸರವನ್ನು ಮೂಡಿಸಿದೆ.
ಕ್ರೀಡಾಂಗಣದ ಅಭಿವೃದ್ಧಿಯ ಹೆಸರಿನಲ್ಲಿ ಕೋಟ್ಯಾಂತರ ಹಣವನ್ನು ಖರ್ಚು ಮಾಡಲಾಗಿದೆ. ಮೈದಾನವನ್ನು ಕಾಂಕ್ರೀಟ್ ಕಟ್ಟಡಗಳ ಗೂಡಾಗಿಸಲಾಗಿದೆ. ಮೇಲಿನ ಭಾಗದ ವಿಶಾಲವಾದ ಮೈದಾನದಲ್ಲಿ ಕ್ರೀಡಾಕೂಟಗಳಿಗಿಂತ ಹೆಚ್ಚಾಗಿ ಇತರ ಕಾರ್ಯಕ್ರಮಗಳೇ ನಡೆಯುತ್ತವೆ. ದಸರಾ ಮತ್ತಿತರ ದೊಡ್ಡ ಕಾರ್ಯಕ್ರಮಗಳು ನಡೆದಾಗ ಮೈದಾನವನ್ನು ವಾಹನ ನಿಲುಗಡೆ ಪ್ರದೇಶವನ್ನಾಗಿ ಮಾರ್ಪಡಿಸಲಾಗುತ್ತದೆ. ಇದೇ ಕಾರಣಕ್ಕೆ ಮೈದಾನ ಹದಗೆಡುತ್ತಿದೆ ಎನ್ನುವುದು ಸ್ಥಳೀಯ ಕ್ರೀಡಾಪಟುಗಳ ಅಳಲಾಗಿದೆ. ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಸಂದರ್ಭ ಕ್ರೀಡಾಸ್ಫೂರ್ತಿಗೆ ಪೂರಕವಾದ ಯಾವುದೇ ವೈಜ್ಞಾನಿಕ ಸ್ಪರ್ಷ ನೀಡಿಲ್ಲ.
ಇಂದು ಮೈದಾನದ ಸುತ್ತ ಕಾಡು ಬೆಳೆದುಕೊಂಡಿದೆ, ಯಾವುದೇ ಸುರಕ್ಷತಾ ಬೇಲಿ ವ್ಯವಸ್ಥೆ ಇಲ್ಲ. ಕನಿಷ್ಠ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಇಲ್ಲ. ಮಳೆನೀರು ಮೈದಾನ ತುಂಬಾ ನಿಂತು ಕೆಸರು ಆವರಿಸಿದೆ. ಈ ಕೆಸರಿನಲ್ಲಿ ವಾಹನಗಳು ನಿತ್ಯ ಸಂಚರಿಸುತ್ತಿರುವುದರಿಂದ ಮೈದಾನ ಸಂಪೂರ್ಣವಾಗಿ ಹದಗೆಟ್ಟಿದೆ. ಬೆಳಗ್ಗಿನ ವಾಯುವಿಹಾರಕ್ಕೆಂದು ಬರುವ ಪ್ರಕೃತಿ ಪ್ರಿಯರಿಗೆ ಈಗ ಮೈದಾನದಲ್ಲಿ ಒಂದು ಹೆಜ್ಜೆ ಇಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ಇದೆ. ಕ್ರೀಡಾಪಟುಗಳಂತು ಹದಗೆಟ್ಟ ಮೈದಾನದಲ್ಲಿ ಅಭ್ಯಾಸ ಮಾಡುವುದನ್ನೇ ನಿಲ್ಲಿಸಿದ್ದಾರೆ.
ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಅವ್ಯವಸ್ಥೆಗಳಿಂದ ಕೂಡಿರುವ ಬಗ್ಗೆ ಸ್ಥಳೀಯ ಕ್ರೀಡಾಪಟುಗಳು ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಆದರೆ ಯಾರೂ ಕೂಡ ಇಲ್ಲಿಯವರೆಗೆ ಮೈದಾನಕ್ಕೆ ಕಾಯಕಲ್ಪ ನೀಡುವ ಮನಸ್ಸು ಮಾಡಿಲ್ಲ. ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ಈ ಮೈದಾನ ಆಡಳಿತ ವ್ಯವಸ್ಥೆಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತ್ತಾಗಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಕೋಟ್ಯಾಂತರ ಹಣ ಖರ್ಚು ಮಾಡುವ ಕ್ರೀಡಾ ಇಲಾಖೆ ನಂತರದ ದಿನಗಳಲ್ಲಿ ಕ್ರೀಡಾಂಗಣದ ನಿರ್ವಹಣೆ ಮತ್ತು ಸುರಕ್ಷತೆಗೆ ಆಸಕ್ತಿ ತೋರದೆ ಇರುವುದು ವಿಪರ್ಯಾಸ.
::: ಮಹಿಳಾ ಕ್ರೀಡಾಪಟುಗಳಿಗೆ ಕಷ್ಟ :::
ಮಳೆ ದಿನಗಳನ್ನು ಹೊರತು ಪಡಿಸಿ ಸೆಪ್ಟಂಬರ್ ತಿಂಗಳಿನಿಂದ ಮೇ ಅಂತ್ಯದವರೆಗೂ ವಿವಿಧ ಕ್ರೀಡಾಕೂಟಗಳು ಮತ್ತು ಕ್ರೀಡಾ ಶಿಬಿರಗಳು ಈ ಮೈದಾನದಲ್ಲಿ ನಡೆಯುತ್ತಿರುತ್ತದೆ. ಆದರೆ ಇಲ್ಲಿ ಬಟ್ಟೆ ಬದಲಿಸುವ ಕೋಣೆಗಳಿಲ್ಲ, ಸುಸಜ್ಜಿತ ಶೌಚಾಲಯದ ವ್ಯವಸ್ಥೆ ಇಲ್ಲ. ಇದರಿಂದ ಬಾಲಕಿಯರು ಹಾಗೂ ಮಹಿಳಾ ಕ್ರೀಡಾಪಟುಗಳು ಹೆಚ್ಚು ಕಷ್ಟ ಮತ್ತು ಮುಜುಗರ ಅನುಭವಿಸುವಂತ್ತಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮೊದಲೇ ಇಲ್ಲದಾಗಿದೆ.
::: ಕ್ರೀಡಾಂಗಣ ಸಮಿತಿ ಸಭೆ ನಡೆದಿಲ್ಲ :::
ಕ್ರೀಡಾಂಗಣಕ್ಕೆ ರಕ್ಷಣೆ ಇಲ್ಲದಾಗಿದೆ, ಮೈದಾನ ಎಲ್ಲಾ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿರುವುದರಿಂದ ಸಂಪೂರ್ಣವಾಗಿ ಹದಗೆಡುತ್ತಿದೆ. ವಾಹನಗಳು ರಾಜಾರೋಷವಾಗಿ ಮೈದಾನದ ಮಧ್ಯ ಓಡಾಡುತ್ತವೆ. ಮಕ್ಕಳು ಹಾಗೂ ಯುವ ಕ್ರೀಡಾಪಟುಗಳಿಗೆ ಆಡಲು ಸಾಧ್ಯವಾಗದ ಹೀನಾಯ ಪರಿಸ್ಥಿತಿಯಲ್ಲಿ ಮೈದಾನವಿದೆ. ಜಿಲ್ಲಾ ಕ್ರೀಡಾಂಗಣ ಸಮಿತಿಯ ಸಭೆ ನಡೆಯದೆ ವರ್ಷವೇ ಕಳೆದಿದೆ. ಸ್ವತ: ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಕ್ರೀಡಾಂಗಣ ಮತ್ತು ಮೈದಾನದ ಅವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸಭೆ ನಡೆಸಬೇಕು.(ಬಾಳೆಯಡ ಕಿಶನ್ ಪೂವಯ್ಯ, ಹಿರಿಯ ಕ್ರೀಡಾಪಟು)