
ಸುಂಟಿಕೊಪ್ಪ NEWS DESK ನ.19 : ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಿದರೆ ಪೋಷಕರಿಗೆ ದಂಡ ಮತ್ತು ಜೈಲುಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಕೂರು ಶಿರಂಗಾಲ ಕಾನ್‌ಬೈಲ್, ತಲಕಾವೇರಿ ಜ್ಞಾನ ವಿಕಾಸ ಸಮಿತಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಮಂಜಿಕೆರೆ ಸಮುದಾಯ ಭವನದಲ್ಲಿ ವಾಹನ ಚಾಲಕರಿಗಾಗಿ ವಾಹನ ಚಾಲನೆ ಮತ್ತು ರಸ್ತೆ ಸುರಕ್ಷತಾ ಕಾರ್ಯಾಗಾರ ನಡೆಯಿತು. ಸುಂಟಿಕೊಪ್ಪ ಪೊಲೀಸ್ ಠಾಣೆಯ ಮುಖ್ಯ ಸಿಬ್ಬಂದಿ ವಿವೇಕ್ ಮಾತನಾಡಿ ಪೋಷಕರು ಅಪ್ರಾಪ್ತರಿಗೆ ವಾಹನಗಳನ್ನು ಚಾಲನೆ ಮಾಡಲು ಅವಕಾಶ ನೀಡಬಾರದು. ಅಪ್ರಾಪ್ತರು ವಾಹನ ಚಾಲನೆ ಮಾಡಿದರೆ ಪೋಷಕರಿಗೆ ರೂ.25 ಸಾವಿರ ದಂಡ ಮತ್ತು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು. ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ಹೊಂದಿ ವಾಹನವನ್ನು ಸುರಕ್ಷಿತವಾಗಿ ಚಾಲನೆ ಮಾಡಬೇಕು. ಎಲ್ಲಾ ವಾಹನ ಚಾಲಕರು ವಾಹನಕ್ಕೆ ಸಂಬAಧಿಸಿದ ದಾಖಲೆಗಳು ಮತ್ತು ಪರವಾನಗಿಯನ್ನು ತಮ್ಮ ಬಳಿ ಇಟ್ಟುಕೊಂಡಿರಬೇಕು ಮತ್ತು ಜೀವವಿಮೆಯನ್ನು ಪಾವತಿಸಿರಬೇಕು ಎಂದು ಸಲಹೆ ನೀಡಿದರು. ತಲಕಾವೇರಿ ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಮಾಲಿನಿ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಕೂರು ಶಿರಂಗಾಲ ಕಾನ್‌ಬೈಲ್ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಖತೀಜ ಹಾಗೂ ಸೇವಾಪ್ರತಿನಿಧಿ ಯಶೋಧ ಉಪಸ್ಥಿತರಿದ್ದರು. ಭೂಮಿಕಾ ತಂಡದ ಸದಸ್ಯರು ನಿರ್ವಹಿಸಿದರು.










