ವಿರಾಜಪೇಟೆ ಜು.10 NEWS DESK : ವಿರಾಜಪೇಟೆಯಲ್ಲಿ ಅಂತಾರಾಷ್ಟ್ರೀಯ ಚಿತ್ರ ಕಲಾವಿದೆ ಆಶಾ ಮಂದಪ್ಪ ನುಡಿನಮನ ಕಾರ್ಯಕ್ರಮ ನಡೆಯಿತು.
ವಿರಾಜಪೇಟೆಯ ಶಾನುಭಾಗ್ ಕಾಂಪ್ಲೆಕ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು.
ಈ ಸಂದರ್ಭ ಮಾತನಾಡಿದ ಕಾರ್ಯಕ್ರಮದ ಆಯೋಜಕರು ಹಾಗೂ ವಕೀಲರಾದ ಎಸ್.ಆರ್. ಜಗದೀಶ್, ಮೂಲತಃ ವಿರಾಜಪೇಟೆಯವರಾದ ಆಶಾ ಮಂದಪ್ಪ ಅವರು ದಿ.ಬಿದ್ದಂಡ ಕರ್ನಲ್ ಚಂಗಪ್ಪ ಅವರ ಸೊಸೆಯಾಗಿದ್ದು, ಚಿತ್ರ ಕಲಾವಿದೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಸಿ.ಎಂ.ಪೂಣಚ್ಚ ಅವರ ಪುತ್ರ ಸಿ.ಪಿ.ಬೆಳ್ಳಿಯಪ್ಪ ಮಾತನಾಡಿ, ಆಶಾ ಮಂದಪ್ಪ ಬಹುಮುಖ ಪ್ರತಿಭೆಯಾಗಿದ್ದು, ಅವರು ಯಾವುದೇ ಕಾರ್ಯಕ್ರಮಗಳಿಗೆ ತೆರಳಿದರೂ ಅವರ ಉಪಸ್ಥಿತಿ ಎದ್ದು ಕಾಣುತಿತ್ತು. ಜನರನ್ನು ತಮ್ಮ ಪ್ರತಿಭೆಯಿಂದಲೇ ಆಕರ್ಷಸುತ್ತಿದ್ದರು ಎಂದು ಹೇಳಿದರು.
ವಿರಾಜಪೇಟೆಯ ಸಾಧಿಕ್ ಆರ್ಟ್ಸ್ ನ ಸಾಧಿಕ್ ಮತ್ತು ವೈದ್ಯರಾದ ಫಾತಿಮಾ ಕಾರ್ಯಪ್ಪ ಮಾತನಾಡಿ, ಆಶಾ ಮಂದಪ್ಪ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ದಿ. ಆಶಾ ಮಂದಪ್ಪ ಚಿತ್ರ ಕಲಾಕೃತಿಗಳ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ನಂದಕುಮಾರ್ ಮಂದಪ್ಪ, ಮಗ ಶಿವು ಮಂದಪ್ಪ, ಸೊಸೆ ಸರೋಜ, ವಿವಿಧ ಕ್ಷೇತ್ರಗಳ ಗಣ್ಯರು, ಸಾರ್ವಜನಿಕರು ಹಾಜರಿದ್ದರು. ವಕೀಲರಾದ ಬಿ. ಬಿ. ಮಾದಪ್ಪ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.