ಸುಂಟಿಕೊಪ್ಪ ಜು.12 NEWS DESK : ಕೊಡಗರಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸ್ವಚ್ಛ ಸಂರ್ಕೀಣ ಘಟಕವನ್ನು ಮಡಿಕೇರಿ ಶಾಸಕ ಡಾ.ಮಂತರ್ಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಬೇಕಾಗಿದ್ದು, ಪ್ರತಿ ಮನೆ ವ್ಯಾಪ್ತಿಯಲ್ಲಿ ಹಸಿಕಸ ಮತ್ತು ಒಣಕಸ ಬೇರ್ಪಡಿಸಿ ಹಾಕಬೇಕು ಎಂದರು. ಪ್ಲಾಸ್ಟಿಕ್ ಮತ್ತು ಗಾಜುಗಳನ್ನು ಪ್ರತ್ಯೇಕವಾಗಿ ವಿಗಂಡಿಸುವುದರ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ನಾವೆಲ್ಲರು ಕೈ ಜೋಡಿಸಬೇಕು ಎಂದು ಕರೆ ನೀಡಿದರು. ಕಸವಿಲೇವಾರಿ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತಾಗಲು ಗ್ರಾಮದಲ್ಲಿನ ಪ್ರತಿಯೊಬ್ಬರೂ ಪಂಚಾಯಿತಿಯೊಂದಿಗೆ ಕೈ ಜೋಡಿಸುವಂತೆ ಅವರು ಮನವಿ ಮಾಡಿದರು. ಸ್ಥಳೀಯ ಅಭಿವೃದ್ಧಿ ನಿಧಿಯಿಂದ ಕೊಡಗರಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ರೂ.55 ಲಕ್ಷದಷ್ಟು ಅನುದಾನ ನಿಗದಿಯಾಗಿದೆ. ಈ ಪೈಕಿ ಕಾನ್ಬೈಲ್ ಮಂಜಿಕೇರೆ ಮುಖ್ಯ ರಸ್ತೆಯನ್ನು ರೂ 5 ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಅಂದಗೋವೆ ಗಿರಿಜನ ಕಾಲೋನಿಯಲ್ಲಿ ವಿದ್ಯುತ್ ಸಂಪರ್ಕ ಕುಡಿಯುವ ನೀರಿನ ಯೋಜನೆ ಅದಷ್ಟು ಶೀಘ್ರವಾಗಿ ಪೂರೈಸುವ ನಿಟ್ಟಿನಲ್ಲಿ ಚೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರತ, ಉಪಾಧ್ಯಕ್ಷ ಅಬ್ಬಾಸ್, ಪಂಚಾಯಿತಿ ಸದಸ್ಯರುಗಳು,
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಶ್, ಕಾರ್ಯದರ್ಶಿ ರೂಬಿ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಸುಂಟಿಕೊಪ್ಪ ವಿಎಸ್ಎಸ್ ಎನ್ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.