ಮಡಿಕೇರಿ ಜು.16 NEWS DESK : ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಸಂಘದ ಮಾಸಿಕ ಸಭೆಯು ಮದಲಾಪುರ ಶ್ರೀ ಬಸವೇಶ್ವರ ದೇವಾಲಯದ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನೂತನ ಜಿಲ್ಲಾಧ್ಯಕ್ಷ ಕೆ.ಕುಶಾಲಪ್ಪ, ಸಂಘವು ಹಲವು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದು, ಇದೀಗ ಹೊಸ ಆಡಳಿತ ಮಂಡಳಿಯ ಮುಂದಾಳತ್ವದಲ್ಲಿ ಸಭೆ ನಡೆಸಲಾಗಿದೆ ಎಂದರು. ಸಂಘವು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ಸೌಲಭ್ಯವನ್ನು ಒದಗಿಸಲು ಅನುಕೂಲ ಮಾಡಲು ಸಂಘ ಕಟ್ಟಿಬದ್ಧವಾಗಿದೆ. ಆ ಮೂಲಕ ಜಿಲ್ಲೆಯ ಕುಲಾಲ ಕುಂಬಾರ ಸಮಾಜದ ಬಂಧುಗಳು ಸಂಘವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ಮುಂದಿನ ದಿನಗಳಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅಪಘಾತ ಪರಿಹಾರ, ಮರಣ ಫಂಡ್ ಇಂತಹ ಹಲವು ಯೋಜನೆಗಳು ಕಾರ್ಯಗತಗೊಳ್ಳಲಿದೆ ಅಲ್ಲದೇ ಸಮಾಜದ ಬಂಧುಗಳಿಗೆ ಕ್ರೀಡೋತ್ಸವ ಮಾಡುವ ಬಗ್ಗೆಯೂ ಶೀಘ್ರದಲ್ಲಿ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದರು.
ಎಲ್ಲಾ ಸಮಾಜಮುಖಿ ಕಾರ್ಯಕ್ರಮಕ್ಕೆ ಸಮಾಜದ ಬಂಧುಗಳ ಪೂರ್ಣ ಸಹಕಾರ ಇದ್ದಾಗ ಮಾತ್ರ ಸಂಘ ಬಲಿಷ್ಠವಾಗಿ ಮುನ್ನುಗ್ಗಲು ಸಾಧ್ಯ ಎಂದ ಅವರು, ಸಮಾಜ ಬಾಂಧವರು ಸಂಘದ ಏಳಿಗೆಗಾಗಿ ಶ್ರಮಿಸಿ ಆ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸೋಣ ಎಂದು ಕರೆ ನೀಡಿದರು.
ಸಂಘದ ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ ಮಾತನಾಡಿ, ಜಿಲ್ಲೆಯ ಕುಲಬಾಂಧವರ ಕಷ್ಟಗಳಿಗೆ ನೆರವಾಗಲು ಸಂಘ ಸನ್ನದ್ಧವಾಗಿದೆ. ಆ ನಿಟ್ಟಿನಲ್ಲಿ ಸಂಘವು ಹಲವು ಯೋಜನೆಗಳನ್ನು ರೂಪಿಸಲು ಕಾರ್ಯೋನ್ಮುಖವಾಗಿದ್ದು, ಜಿಲ್ಲೆಯ ಕುಲಾಲ ಕುಂಬಾರ ಸಮಾಜದ ಬಂಧುಗಳು ಸಂಘದ ಸದಸ್ಯತ್ವವನ್ನು ಪಡೆಯಬೇಕು ಆ ಮೂಲಕ ಸಂಘವನ್ನು ಬಲಪಡಿಸಬೇಕೆಂದು ಕರೆ ನೀಡಿದರು.
ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಉಪಾಧ್ಯಕ್ಷ ಲಯನ್ ದಾಮೋದರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಹಾಜರಿದ್ದ ಸಂಘದ ಪ್ರಮುಖರು ಹಾಗೂ ಪ್ರದಾಧಿಕಾರಿಗಳು ಸಂಘದ ಏಳಿಗೆಗಾಗಿ ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಸಂಘದ ಖಜಾಂಚಿ ಗಿರೀಶ್, ಪದಾಧಿಕಾರಿಗಳಾದ ಸುರೇಶ್, ಅಶ್ವಥ್, ವಿಠಲ್, ಅಪ್ಪಾಜಿ, ಮಂಜು ಬೈಚನಹಳ್ಳಿ, ಮನು ದೇವಪ್ಪ, ಕೆ.ವೈ.ಲಕ್ಷ್ಮಣ, ಪವನ್ ಕುಲಾಲ್ ಹಾಜರಿದ್ದರು. ಸದಸ್ಯರಾದ ಶ್ರೀನಿವಾಸ್ ಪ್ರಾರ್ಥಿಸಿದರು, ಲೋಕೇಶ್ ಕುಶಾಲನಗರ ನಿರೂಪಿಸಿದರು, ಚಂದ್ರಶೇಖರ್ ಕುಲಾಲ್ ವಂದಿಸಿದರು.