ಮಡಿಕೇರಿ ಜು.16 NEWS DESK : ಮೇಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗದ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ವಾಹನಗಳು ಹಾಗೂ ಜನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇದನ್ನು ಮನಗಂಡ ಗ್ರಾಮಸ್ಥರು ಗುಂಡಿಬಿದ್ದ ರಸ್ತೆಯನ್ನು ಶ್ರಮದಾನದ ಮೂಲಕ ಮುಚ್ಚಿದರು.
ಕಳೆದ ಹಲವು ತಿಂಗಳುಗಳಿಂದ ಹೊಂಡ ಗುಂಡಿಗಳಾಗಿದ್ದ ರಸ್ತೆ ತುಂಬಾ ಮಳೆನೀರು ನಿಂತು ಸಂಚಾರ ಕಷ್ಟಕರವಾಗಿತ್ತು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ತುಂಬಾ ನೀರು ತುಂಬಿ ಶಾಲೆಯ ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆಯಾಗಿತ್ತು.
ಮೇಕೇರಿ ಗ್ರಾ.ಪಂ ಸದಸ್ಯ ಎಂ.ಯು.ಹನೀಫ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಗುಂಡಿಗಳನ್ನು ಮುಚ್ಚಿದರು. ರಸ್ತೆಯ ಎರಡೂ ಬದಿಯಲ್ಲಿ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಕಲ್ಪಿಸಿದರು. ಶ್ರಮದಾನದ ಕುರಿತು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಎಂ.ಯು.ಹನೀಫ್ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಇದಾಗಿದ್ದು, ಹೊಂಡ, ಗುಂಡಿಗಳಿದ್ದ ಕಾರಣ ನೀರು ನಿಂತು ವಾಹನಗಳು ಮತ್ತು ವಿದ್ಯಾರ್ಥಿಗಳ ಸಂಚಾರ ಸುಗಮವಾಗಿರಲಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಗ್ರಾಮಸ್ಥರು ಸೇರಿಕೊಂಡು ಶ್ರಮದಾನದ ಮೂಲಕ ಗುಂಡಿಗಳನ್ನು ಮುಚ್ಚಿ ಚರಂಡಿ ವ್ಯವಸ್ಥೆ ಕಲ್ಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಆಡಳಿತ ವ್ಯವಸ್ಥೆ ರಸ್ತೆಯನ್ನು ಅಭಿವೃದ್ಧಿ ಪಡಿಸಲಿದೆ ಎನ್ನುವ ವಿಶ್ವಾಸವಿದೆ ಎಂದರು.
ಶಾಲಾ ಆವರಣವಾಗಿರುವ ಕಾರಣ ಚಾಲಕರುಗಳು ಕೂಡ ಬಹಳ ಸುರಕ್ಷಿತ ರೀತಿಯಲ್ಲಿ ವಾಹನ ಚಲಾಯಿಸಬೇಕೆಂದು ಅವರು ಮನವಿ ಮಾಡಿದರು.
ಸ್ಥಳೀಯರಾದ ಎಂ.ಯು.ರಫೀಕ್, ಟಿ.ಆರ್.ಜಗದೀಶ್, ಕೆ.ಟಿ.ವಿಜಯ, ರಾಧಾಕೃಷ್ಣ, ಸ್ಟೀಫನ್, ರೆಹಮಾನ್, ಪಂಚಾಯಿತಿ ವಾಟರ್ ಮ್ಯಾನ್ ಸೀತಾರಾಮ್, ಬಿಲ್ ಕಲೆಕ್ಟರ್ ಶ್ರೇಯಸ್ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.