ಮಡಿಕೇರಿ ಜು.16 NEWS DESK : ಮಡಿಕೇರಿ ಗ್ರಾಮಾಂತರ ಮಂಡಲ ವ್ಯಾಪ್ತಿಯ ಕಕ್ಕಬ್ಬೆ ಬಿಜೆಪಿ ಶಕ್ತಿಕೇಂದ್ರದ ಮರಂದೋಡ ಬೂತ್ ನ ಬಿಜೆಪಿ ಕಾರ್ಯಕರ್ತರು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾದ ಹಿನ್ನೆಲೆಯಲ್ಲಿ ಕಕ್ಕಬ್ಬೆ ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಭೆಯನ್ನು ಕರೆಯಲಾಗಿತ್ತು.
ಶಕ್ತಿಕೇಂದ್ರದ ಪ್ರಮುಖ್ ಸುನಂದ ಅವರು ಮಾತನಾಡಿ ಚೋಯಮಾಡಂಡ ಐನ್ ಮನೆಗೆ ಹೋಗುವ ಸಂಪರ್ಕ ರಸ್ತೆಯ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಮನವಿ ಪತ್ರವನ್ನು ನೀಡಲು ನಮ್ಮ ಕಾರ್ಯಕರ್ತರು ಹಾಗೂ ಕುಟುಂಬಸ್ಥರು ಕ್ಷೇತ್ರದ ಶಾಸಕರ ಗೃಹ ಕಚೇರಿಗೆ ಹೋಗಿದ್ದರು. ಈ ಸಂದರ್ಭ ಏಕಾಏಕಿ ಅವರಿಗೆ ಕಾಂಗ್ರೆಸ್ ಪಕ್ಷದ ಶಾಲುಗಳನ್ನು ಹಾಕಿದ್ದಾರೆ. ಶಾಸಕರಿಗೆ ಮತ್ತು ವೇದಿಕೆಯಲ್ಲಿದ್ದವರಿಗೆ ಮುಜುಗರವಾಗಬಾರದೆಂಬ ಉದ್ದೇಶದಿಂದ ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಶಾಲನ್ನು ಹಾಕಿಸಿಕೊಂಡಿದ್ದಾರೆ. ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎನ್ನುವುದು ಸುಳ್ಳು ವದಂತಿ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಡಿಕೇರಿ ಗ್ರಾಮಾಂತರ ಮಂಡಲ ಯುವಮೋರ್ಚಾ ಅಧ್ಯಕ್ಷ ಚೇತನ್ ಬಂಗೇರ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಯಾಗಿರುವ ಶಾಸಕರು ಕೇವಲ ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಶಾಸಕರಲ್ಲ. ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಎಲ್ಲಾ ಮತದಾರರಿಗೆ ಶಾಸಕರಾಗಿರುತ್ತಾರೆ. ಇದೇ ಮನೋಭಾವದಲ್ಲಿ ನಮ್ಮ ಪಕ್ಷದ ಹಿರಿಯ ಕಾರ್ಯಕರ್ತರು ಶಾಸಕರ ಗೃಹ ಕಚೇರಿಗೆ ಹೋದಂತಹ ಸಂದರ್ಭದಲ್ಲಿ ಮನವಿಪತ್ರವನ್ನು ತಡವಾಗಿ ಸ್ವೀಕರಿಸಿರುವುದಲ್ಲದೆ ಪಕ್ಷ ಸೇರ್ಪಡೆ ಎಂದು ಅಪಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿದರು.
ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸುಮಾರು 550 ಮತದಾರರು ಇರುವ ಮರದೋಂಡು ಬೂತ್ ನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಯದುವೀರ್ ಅವರು 409 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರು ಕೇವಲ 111 ಮತಗಳನ್ನು ಗಳಿಸಿದ್ದಾರೆ. ಸುಭದ್ರವಾದ ಬಿಜೆಪಿ ಮತದಾರರಿರುವ ಬೂತ್ ನಲ್ಲಿ ಗೊಂದಲ ಸೃಷ್ಟಿಸಿ ಬಿಜೆಪಿಯ ಮತಗಳನ್ನು ತಮ್ಮೆಡೆಗೆ ಸೆಳೆಯುವ ಉದ್ದೇಶದಿಂದ ಪಕ್ಷ ಸೇರ್ಪಡೆಯ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕೊಡಗನ್ನು ಬಿಜೆಪಿಯ ಭದ್ರಕೋಟೆ ಎಂದು ಸಾಬೀತು ಮಾಡಿ ಕಾಂಗ್ರೆಸ್ ನ ಕುತಂತ್ರಕ್ಕೆ ತಕ್ಕ ಉತ್ತರವನ್ನು ನೀಡುತ್ತೇವೆ ಎಂದು ಚೇತನ್ ಬಂಗೇರ ತಿಳಿಸಿದರು.
ಯುವಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೊನ್ನಚೆಟ್ಟಿರ ವಿನೋದ್ ಮಾತನಾಡಿ ಶಾಸಕರು ಅಭಿವೃದ್ಧಿ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಲಿ ಎಂದರು.
ಸಭೆಯಲ್ಲಿ ಕಕ್ಕಬ್ಬೆ ಬಿಜೆಪಿ ಪ್ರಮುಖರಾದ ಚಂಡೀರ ಜಗದೀಶ್, ಮಡಿಕೇರಿ ಗ್ರಾಮಾಂತರ ಮಂಡಲ ಯುವ ಮೋರ್ಚಾದ ಉಪಾಧ್ಯಕ್ಷ ಮೇರಿಯಂಡ ಆದೇಶ, ಪದಾಧಿಕಾರಿಗಳಾದ ಚಂಡೀರ ರೋಷನ್, ಪಕ್ಷದ ಹಿರಿಯರು ಹಾಗೂ ಗ್ರಾಮಸ್ಥರುಗಳಾದ ಮುಕ್ಕಾಟಿರ ದೇವೇಂದ್ರ, ಮುಕ್ಕಾಟಿರ ರಮೇಶ್, ಕಲಿಯಂಡ ಯತೀಶ್, ಪರದಂಡ ಕರುಂಬಯ್ಯ, ರಾಬಿನ್ ಬೋಪಣ್ಣ, ರಂಜು ಚಂಗಪ್ಪ, ಬಾರಿಕೆ ನಂದ, ಮಾಚರ್ಂಡ ಪಳಂಗಪ್ಪ, ಬಾಲ್ಯಡಿರ ಸಂತು, ಬಡ್ಕಡ ಸುರೇಶ ಎನ್ ಶಂಭು, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.