ಮಡಿಕೇರಿ ಜು.16 NEWS DESK : ಜರ್ಮನ್ ಸರ್ಕಾರದಿಂದ ಮಾನ್ಯತೆ ಪಡೆದಿರುವ ಮೆ| ಟ್ಯಾಲೆಂಟ್ ಆರೆಂಜ್ ಸಂಸ್ಥೆಯು ಭಾರತ ದೇಶದಿಂದ ನರ್ಸ್ ಆಗಿ ಕೆಲಸ ನಿರ್ವಹಿಸಲು ಬಿಎಸ್ಸಿ ಹಾಗೂ ಜಿಎನ್ಎಂ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಜರ್ಮನಿಯಲ್ಲಿ ಉದ್ಯೋಗ ಕಲ್ಪಿಸಲು ಮುಂದೆ ಬಂದಿದೆ.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ನರ್ಸಿಂಗ್ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ, ಕೇರಳ ರಾಜ್ಯದ ತಿರುವನಂತಪುರದ ತರಬೇತಿ ಕೇಂದ್ರದಲ್ಲಿ 8 ತಿಂಗಳ ಕಾಲ ಜರ್ಮನ್ ಭಾಷೆಯ ಬಗ್ಗೆ ತರಬೇತಿ ನೀಡಿ, ಸಂಸ್ಥೆಯ ವತಿಯಿಂದ ಊಟ ಹಾಗೂ ವಸತಿ ಸೌಲಭ್ಯ ನೀಡಿ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಒದಗಿಸಲಾಗುವುದು.
ಆಸಕ್ತ ಅಭ್ಯರ್ಥಿಗಳು ಬಿಎಸ್ಸಿ (ನರ್ಸಿಂಗ್), ಜಿಎನ್ಎಂ ವಿದ್ಯಾರ್ಹತೆ ಹೊಂದಿರಬೇಕು. 38 ವರ್ಷ ವಯೋಮಿತಿ ಒಳಗಿರುವ ಮಹಿಳಾ ಅಭ್ಯರ್ಥಿ ಹಾಗೂ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೊಸಬರು ಮತ್ತು ಅನುಭವವುಳ್ಳವರಿಗೂ ಅವಕಾಶವಿದೆ. ಹೆಣ್ಣು ಮಕ್ಕಳು ಚಿಕ್ಕ ಮಕ್ಕಳನ್ನು ಹೊಂದಿದ್ದಲ್ಲಿ ತಮ್ಮೊಂದಿಗೆ ಕರೆದೊಯ್ಯಲು ಅವಕಾಶವಿರುವುದಿಲ್ಲ. ಭಾರತೀಯ ನರ್ಸಿಂಗ್ ಲೈಸೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ. ಜರ್ಮನಿಯಲ್ಲಿ ಕೆಲಸ ನಿರ್ವಹಿಸಲು ಉತ್ಸುಕರಾದ ಈಗಾಗಲೇ ನರ್ಸಿಂಗ್ ಪೂರ್ಣಗೊಳಿಸಿದ ಉದ್ಯೋಗಾಕಾಂಕ್ಷಿಗಳು ಸ್ವ-ವಿವರ ಹಾಗೂ ದಾಖಲಾತಿಗಳ ಪ್ರತಿಯನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 11, ಜಿಲ್ಲಾಡಳಿತ ಭವನ, ಮಡಿಕೇರಿ ಇಲ್ಲಿ ಸಲ್ಲಿಸಬಹುದು ಎಂದು ಕೊಡಗು ಉಪ ವಿಭಾಗದ ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟ್ಟಿ ತಿಳಿಸಿದ್ದಾರೆ.