ನಾಪೋಕ್ಲು ಜು.18 NEWS DESK : ನಾಪೋಕ್ಲು ವ್ಯಾಪ್ತಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರಿ ಗಾಳಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಕೊಟ್ಟಮುಡಿ, ಹೊದ್ದುರು, ಬಲಮುರಿಗಳಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿದೆ.
ನಾಪೋಕ್ಲು -ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಹೊದ್ದೂರು ಗ್ರಾಮದ ಬೊಳಿಬಾಣೆಯಲ್ಲಿ ರಸ್ತೆಯ ಮೇಲೆ ನಾಲ್ಕು ಅಡಿಗಳಷ್ಟು ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕರಸ್ತೆ, ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆ ಜಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮೂರ್ನಾಡು ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಿ ನಾಪೋಕ್ಲು ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ ಹೊದ್ದೂರು ಮಾರ್ಗವಾಗಿ ಮೂರ್ನಾಡಿಗೆ ವಾಹನಗಳು ಸಂಚರಿಸುತ್ತಿವೆ. ಅಪಾಯ ಮಟ್ಟ ಮೀರಿ ಪ್ರವಾಹ ಹರಿಯುತ್ತಿರುವ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಗೇಡ್ ಅಳವಡಿಸಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ.
ಎಮ್ಮೆಮಾಡು ಹಾಗೂ ಕೈಕಾಡ ಗ್ರಾಮದ ಕುಲ್ಲಚೆಟ್ಟಿ ಕುಟುಂಬಸ್ಥರು ಸೇರಿದಂತೆ ಇನ್ನಿತರರು ಗದ್ದೆಗಳಲ್ಲಿದ್ದ (ಅಗೆ) ಬತ್ತದ ಸಸಿ ಸೇರಿದಂತೆ ಬಹುತೇಕ ಗದ್ದೆಗಳು ಜಲವೃತವಾಗಿದೆ.
ಮಳೆ ಬಿರುಸು ಇದೇ ರೀತಿ ಮುಂದುವರೆದರೆ ನಾಪೋಕ್ಲು-ಕೊಟ್ಟಮುಡಿ ಸಂಪರ್ಕ ರಸ್ತೆ ಸೇರಿದಂತೆ ನಾಪೋಕ್ಲು ವ್ಯಾಪ್ತಿಯ ಎಲ್ಲಾ ಪ್ರಮುಖ ರಸ್ತೆಗಳ ಸಂಚಾರ ಕಡಿತಗೊಳ್ಳುವ ಸಾಧ್ಯತೆ ಇದೆ.
ಚೆರಿಯಪರಂಬುವಿನಲ್ಲಿ ಕಾವೇರಿ ನದಿ ದಡದಲ್ಲಿ ವಾಸಿಸುವ ಜನರಿಗೆ ಎರಡು ತಿಂಗಳ ಹಿಂದೆ ಕಂದಾಯ ಇಲಾಖೆ ಮನೆ ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿತ್ತು. ಇದೀಗ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಹಲವರು ಸ್ಥಳಾಂತರಗೊಂಡಿದ್ದು, ಇನ್ನು ಕೆಲವು ನಿವಾಸಿಗಳು ಮಳೆ ಇಳಿಮುಖಗೊಳ್ಳುವುದನ್ನು ಎದುರು ನೋಡುತ್ತಿದ್ದಾರೆ.
ವರದಿ : ದುಗ್ಗಳ ಸದಾನಂದ.