ಮಡಿಕೇರಿ ಜು.19 NEWS DESK : ಭಾರತದ ಸೈನ್ಯದ ಯುದ್ಧ ಸಾಮರ್ಥ್ಯ ಹೆಚ್ಚಳದೊಂದಿಗೆ ಯುವ ಸಮೂಹಕ್ಕೆ ಉದ್ಯೋಗ ದೊರಕಿಸಿಕೊಡುವ ಕೇಂದ್ರದ ಅಗ್ನಿವೀರ್ ನೇಮಕಾತಿಯ ಕುರಿತು ಅನಗತ್ಯ ಗೊಂದಲ ಸೃಷ್ಟಿ ಸರಿಯಲ್ಲ. ಇದೊಂದು ಅತ್ಯುತ್ತಮವಾದ ಯೋಜನೆ ಎಂದು ಬಿಜೆಪಿ ಪೂರ್ವ ಸೈನಿಕರ ಪ್ರಕೋಷ್ಟದ ರಾಜ್ಯ ಸಂಚಾಲಕÀ ಮೇಜರ್ ಓಡಿಯಂಡ ಎಸ್.ಚಿಂಗಪ್ಪ ಸಮರ್ಥಿಸಿದ್ದಾರೆ. ಮಡಿಕೇರಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷವಾದ ಕಾಂಗ್ರೆಸ್ ಅಗ್ನಿವೀರ್ ಸೇರ್ಪಡೆಯ ಕುರಿತು ಸುಳ್ಳು ಆಪಾದನೆಗಳ ಮೂಲಕ ಗೊಂದಲ ಮೂಡಿಸುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು. ಪ್ರಸ್ತುತ ಯುದ್ಧದ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಇದಕ್ಕೆ ಪೂರಕವಾಗಿ ಯುವ ಸಮೂಹವನ್ನು ಸೈನ್ಯಕ್ಕೆ ಸೇರ್ಪಡೆಗೊಳಿಸುವ ಮೂಲಕ ಭಾರತೀಯ ಸೈನ್ಯವನ್ನು ಶಕ್ತಿಯುತವಾಗಿ ಕಟ್ಟುವ ಚಿಂತನೆಗಳು ಅಗ್ನಿವೀರ್ ನೇಮಕಾತಿಯಲ್ಲಿ ಅಡಗಿದೆ. 2022 ರಿಂದ ಯೋಜನೆ ಆರಂಭವಾಗಿದ್ದು, ಅತ್ಯಂತ ಉತ್ಸಾಹದಿಂದ ಯುವ ಸಮೂಹ ಸೇರ್ಪಡೆಗೊಳ್ಳುತ್ತಿದೆ ಎಂದು ತಿಳಿಸಿದರು. ಭಾರತೀಯ ಸೈನ್ಯದ ಸೈನಿಕರ ಸರಾಸರಿ ವಯೋಮಿತಿ 32 ಇದ್ದು, ಇದನ್ನು ಇಳಿಸುವ ಮೂಲಕ ಸೈನ್ಯದಲ್ಲಿ ಮತ್ತಷ್ಟು ಸಾಮರ್ಥ್ಯವನ್ನು ತುಂಬುವ ಉದ್ದೇಶದಿಂದ ಅಗ್ನಿವೀರ್ ಮೂಲಕ ಯುವ ಸಮೂಹವನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಅಗ್ನಿವೀರ್ ಆಗಿ ಸೈನ್ಯಕ್ಕೆ ಭರ್ತಿಯಾಗುವವರಿಗೆ ಉತ್ತಮ ವೇತನದೊಂದಿಗೆ 4 ವರ್ಷಗಳ ಸೇವೆ ಸಲ್ಲಿಸಲು ಅವಕಾಶ ಒದಗಿಸಲಾಗಿದೆ. ಅವಧಿ ಮುಗಿದ ಬಳಿಕ 12 ಲಕ್ಷ ರೂ. ಮೊತ್ತವನ್ನು ಅವರಿಗೆ ನೀಡಲಾಗುತ್ತದೆ. ಇದರೊಂದಿಗೆ ಅವಧಿ ಪೂರೈಸಿದ ಅಗ್ನಿವೀರ್ ಸೈನಿಕರಲ್ಲಿ ಶೇ.25 ರಷ್ಟು ಮಂದಿಯ ಸೇವೆಯನ್ನು ಸೈನ್ಯದಲ್ಲಿ ಮುಂದುವರಿಸಲಾಗುತ್ತದೆ ಎಂದು ಹೇಳಿದರು.
::: ನೇಮಕಾತಿಯಲ್ಲಿ ಮೀಸಲಾತಿ :::
ಅಗ್ನಿವೀರ್ ಸೇವೆ ಸಲ್ಲಿಸಿ ಮರಳುವ ಯೋಧರಿಗೆ ಅರೆಸೇನಾ ಪಡೆ ಸೇರಿದಂತೆ ರಾಜ್ಯದ ವಿವಿಧ ಹುದ್ದೆಗಳಲ್ಲಿ ಶೇ.10 ರಷ್ಟು ಮೀಸಲಾತಿ ಸೌಲಭ್ಯವಿದೆ. ಅಗ್ನಿವೀರ್ ಆಗಿ ಸೈನ್ಯದಲ್ಲಿ ಸೇವೆ ಸಲ್ಲಿಸುವ ಸಂದರ್ಭ ಮೃತ ಪಟ್ಟರೆ ಸರಿ ಸುಮಾರು 1.50 ಕೋಟಿ ರೂ. ಪರಿಹಾರವನ್ನು ಆತನ ಕಟುಂಬಸ್ಥರಿಗೆ 3 ತಿಂಗಳ ಒಳಗಾಗಿ ನೀಡಲಾಗುತ್ತದೆ. ಅಂಗ ವೈಕಲ್ಯಕ್ಕೆ ಒಳಗಾದಲ್ಲಿ ಪರಿಹಾರ ನೀಡುವ ವ್ಯವಸ್ಥೆಯೂ ಇದೆ ಎಂದು ತಿಳಿಸಿದರು. ಅಗ್ನಿವೀರ್ ಆಗಿ ಸೇವೆ ಸಲ್ಲಿಸಿ ಮರಳಿದ ಸೈನಿಕರಿಗೆ ಆರ್ಮಿ ಕ್ಯಾಂಟೀನ್ ಸೌಲಭ್ಯ ದೊರಕಲಿದೆ, ಇಸಿಹೆಚ್‌ಎಸ್‌ನಲ್ಲಿ ಕೆಲವು ನಿಬಂಧನೆಗಳೊಂದಿಗೆ ಆರೋಗ್ಯ ಸೇವೆಯೂ ದೊರೆಯುತ್ತದೆ ಎಂದ ಮೇ.ಚಿಂಗಪ್ಪ, ಅಗ್ನಿವೀರ್ ಬಗ್ಗೆ ಅನಗತ್ಯ ಗೊಂದಲದ ಹೇಳಿಕೆಗಳನ್ನು ನೀಡುವುದು ಬೇಡವೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಪೂರ್ವ ಸೈನಿಕರ ಪ್ರಕೋಷ್ಟದ ಸಂಚಾಲಕರಾದ ಸುಬೇದಾರ್ ಮೇಜರ್ ಪಟ್ರಪಂಡ ಕರುಂಬಯ್ಯ, ಸದಸ್ಯರುಗಳಾದ ಕುಟ್ಟಂಡ ಎಂ.ಮಾದಪ್ಪ, ಸುಬೇದಾರ್ ಮೇಜರ್ ಅಗ್ರಿಮನೆ ವಾಸಪ್ಪ, ಸುಬೇದಾರ್ ಮೇಜರ್ ನಾಟೋಳಂಡ ಸೋಮಯ್ಯ ಹಾಗೂ ಹೆಚ್.ಅಪ್ಪಯ್ಯ ಉಪಸ್ಥಿತರಿದ್ದರು.










