ವಿರಾಜಪೇಟೆ ಜು.19 NEWS DESK : ಮಾಧ್ಯಮ ಮತ್ತು ಆಡಳಿತ ವ್ಯವಸ್ಥೆಯಿಂದ ಸಮಾಜದ ಅಭಿವೃದ್ದಿ ಕಾಣಬಹುದು ಎಂದು ವಿರಾಜಪೇಟೆ ತಹಶೀಲ್ದಾರ್ ಹೆಚ್.ಎನ್. ರಾಮಚಂದ್ರ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಎ-ಜೆಡ್ ಸಭಾಂಗಣದಲ್ಲಿ ನಡೆದ ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಮತ್ತು ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸಮಾಜದ ಓರೆಕೋರೆಗಳನ್ನು ತಿದ್ದುವ ಮೂಲಕ ಉತ್ತಮ ಸಮಾಜವನ್ನು ರೂಪಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು, ಮಾಧ್ಯಮದಿಂದ ಸಮಾಜವನ್ನು ತಿದ್ದುವ ಕಾರ್ಯ ನಡೆಯುತ್ತಿದೆ. ಆಡಳಿತ ವ್ಯವಸ್ಥೆಗೆ ಕೂಡ ಮಾಧ್ಯಮದ ಕೊಡುಗೆ ಅಪಾರ. ಸರ್ಕಾರದ ಯಾವುದೇ ಕಾರ್ಯಕ್ರಮಗಳು ಜನರಿಗೆ ತಲುಪಲು ಮಾಧ್ಯಮದ ಕೊಡುಗೆ ಹೆಚ್ಚಿದೆ. ಪತ್ರಿಕೆಗಳನ್ನು ಓದುವುದರಿಂದ ಸಮಸ್ಯೆಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಅಲ್ಲದೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪತ್ರಿಕಾ ವರದಿಗಳು ಮತ್ತು ಪತ್ರಕರ್ತರ ಸಹಕಾರ ಕೂಡಾ ಅತ್ಯಗತ್ಯವಾಗಿದೆ. ತಾಲ್ಲೂಕಿನ ಪತ್ರಕರ್ತರ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ. ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಈಗ ತಾಲೂಕಿನ ಆಡಳಿತ ಜವಾಬ್ದಾರಿಯಿಂದ ಎಲ್ಲ ಸಮಸ್ಯೆಗಳು ಅರಿವಿಗೆ ಬಂದಿದೆ. ಸಾಕಷ್ಟು ಕಾರ್ಯಗಳು ಮಾಡಬೇಕಿದೆ. ಮುತುವರ್ಜಿ ವಹಿಸಿ ಜನರ ಸೇವೆಗೆ ಮುಂದಾಗುವುದಾಗಿ ಭರವಸೆ ನೀಡಿದರು.
ಸಿದ್ದಾಪುರದ ನೋಟರಿ ವಕೀಲರು, ಗುಹ್ಯ ಅಗಸ್ಥ್ಯೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ವೆಂಕಟೇಶ್ ಮಾತನಾಡಿ, ದೇಶದ ಭವಿಷ್ಯ ತರಗತಿ ರೂಪುಗೊಳ್ಳುವುದು ಶಾಲಾ ಕೊಠಡಿಗಳಲ್ಲಿ. ಮಕ್ಕಳ ಹಿನ್ನೆಲೆಯನ್ನು ಅರ್ಥೈಸಿಕೊಂಡು ನೀಡುವ ಶಿಕ್ಷಣ ಪ್ರಯೋಜನಕಾರಿ. ಇದರಿಂದ ಸಮಾಜದಲ್ಲಿ ಋಣಾತ್ಮಕ ಅಂಶಗಳು ಕಡಿಮೆಯಾಗುತ್ತದೆ. ಅಂತೆಯೇ ಪತ್ರಕರ್ತರು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದರೆ ಮಾದರಿ ಸಮಾಜ ರೂಪುಗೊಳ್ಳಲಿದೆ. ಗ್ರಾಮಾಭಿವೃದ್ಧಿಯಲ್ಲಿ ಮಾಧ್ಯಮದ ಕೊಡುಗೆ ಅಪಾರ. ಮಾಧ್ಯಮದ ಇಲ್ಲದ ಸಮಾಜ ನಿರೀಕ್ಷೆ ಮಾಡಲು ಸಾಧ್ಯವಿಲ್ಲ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವಲ್ಲಿ ಮಾದ್ಯಮದ ಪಾತ್ರ ಬಹಳಷ್ಟಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪ್ರತಿಯೊಂದು ವರದಿಯು ವೈಯಕ್ತಿಕ ವಿಚಾರಗಳನ್ನು ಬದಿಗೊತ್ತಿ ವಸ್ತುನಿಷ್ಠವಾಗಿ ಹಾಗೂ ಸಮಾಜದ ಹಿತದೃಷ್ಟಿಯಿಂದ ರೂಪುಗೊಳ್ಳಬೇಕು, ಪ್ರತಿಯೊಬ್ಬರಿಗೂ ಸಂಘ ಶಕ್ತಿ ಮುಖ್ಯವಾಗಿದೆ. ಏಕ ವ್ಯಕ್ತಿಯಿಂದ ಏನೂ ಮಾಡಲು ಸಾದ್ಯವಿಲ್ಲ. ಸಂಘ ನಮಗೆ ಏನೂ ಮಾಡಿದೆ ಎಂಬುವುದಕ್ಕಿಂತ ನಾನು ಸಂಘಕ್ಕೆ ಎನೂ ಕೊಡುಗೆ ನೀಡಿದ್ದೇನೆ ಎಂಬುವುದನ್ನು ಯೋಚಿಸಬೇಕಿದೆ. ಪತ್ರಕರ್ತರು ಸದಾ ಕ್ರೀಯಾಶೀಲರಾಗಿರಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಪತ್ರಿಕಾ ರಂಗದಲ್ಲಿ ದೊರೆಯುವ ಸತ್ಯವನ್ನು ಹೇಳುವ ಧೈರ್ಯ ಬೇರೆ ಯಾವುದೇ ಕ್ಷೇತ್ರದಲ್ಲಿ ದೊರೆಯದು. ಸದಸ್ಯರು ಒಂದಾಗಿ ಸಂಘವನ್ನು ಮುನ್ನಡೆಸಬೇಕಿದೆ ಎಂದರು.
ರಾಜ್ಯ ಸಮಿತಿ ಸದಸ್ಯ ಟಿ.ಎನ್.ಮಂಜುನಾಥ್ ಸಂಘದ ಚಟುವಟಿಕೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ರಜಿತ್ ಕುಮಾರ್ ಗುಹ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಸಂಘದ ಸದಸ್ಯ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ : ವಿರಾಜಪೇಟೆ ಕ್ಷೇತ್ರದ ಶಾಸಕಾರದ ಎ.ಎಸ್.ಪೊನ್ನಣ್ಣ ಅವರು ತಮ್ಮ ತಂದೆ ದಿವಂಗತ ಎ.ಕೆ.ಸುಬ್ಬಯ್ಯ ಹಾಗೂ ತಾಯಿ ದಿವಂಗತ ಎ.ಎಸ್.ಪೊನ್ನಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಯನ್ನು ಎ.ಎನ್ ವಾಸು ಅವರಿಗೆ ಪ್ರದಾನ ಮಾಡಲಾಯಿತು.
ವಿರಾಜಪೇಟೆ ಪ್ರಗತಿ ಶಾಲೆಯ ಮುಖ್ಯಸ್ಥ ಮಾದಂಡ ತಿಮ್ಮಯ್ಯ ಅವರು ತಮ್ಮ ತಾಯಿ ದಿವಂಗತ ತುಂಗಾ ಪೂವಯ್ಯ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಶೈಕ್ಷಣಿಕ ವರದಿ ಕುರಿತ ಪ್ರಶಸ್ತಿಯನ್ನು ಬಡಕಡ ರಜಿತಾ ಕಾರ್ಯಪ್ಪ ಅವರಿಗೆ ನೀಡಲಾಯಿತು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಆರ್ ಸವಿತಾ ರೈ ಅವರು ತಮ್ಮ ತಂದೆ ದಿವಂಗತ ಬಿ.ಎಸ್ ರಂಗನಾಥ ರೈ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿಗೆ ಪಿ.ವಿ ಅಂತೋಣಿ, ಸಿದ್ದಾಪುರದ ಸಮಾಜ ಸೇವಕರಾದ ಕೆ.ಯು.ಅಬ್ದುಲ್ ಮಜೀದ್ ಅವರು ತಮ್ಮ ತಂದೆ ದಿವಂಗತ ಉಸ್ಮಾನ್ ಹಾಜಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿಗೆ ರವಿ ಕುಮಾರ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಕೋಲತಂಡ ರಘು ಮಾಚಯ್ಯ ಅವರು ತಮ್ಮ ತಂದೆ ದಿವಂಗತ ಕೋಲತಂಡ ಉತ್ತಪ್ಪ ಹಾಗೂ ತಾಯಿ ಕಾಮವ್ವ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ ಮತ್ತು ವನ್ಯಜೀವಿ ವರದಿ ಕುರಿತ ಪ್ರಶಸ್ತಿಯನ್ನು ಆರ್. ಸುಬ್ರಮಣಿ ಅವರಿಗೆ ಪ್ರದಾನ ಮಾಡಲಾಯಿತು.
ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡುವ ಪ್ರತಿಭಾ ಪುರಸ್ಕಾರವನ್ನು ಪಡೆದ ಕೆ. ಈಶಾನ್ವಿ, ರಾಗ ಹೇಮಂತ್ ಶೆಟ್ಟಿ, ಹಿಮಾನಿ, ರಕ್ಷನ್, ಜೀಷ್ಮ, ಜಶ್ಮಿತಾ ಹಾಗೂ ಸಮೃದ್ಧಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಪ್ರಶಸ್ತಿ ಪಡೆದ ರವಿಕುಮಾರ್ ಹಾಗೂ ಆರ್.ಸುಬ್ರಮಣಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳಾದ ಕೆ.ಈಶಾನ್ವಿ ಹಾಗೂ ಸಮೃದ್ದಿ ಪ್ರತಿಭಾ ಪುರಸ್ಕಾರದಿಂದ ನಮಗೆ ಇನ್ನಷ್ಟು ಹೆಚ್ಚು ಅಂಕಗಳನ್ನು ಪಡೆಯುವ ಸ್ಪೂರ್ತಿ ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಮುಸ್ತಫ ವಾರ್ಷಿಕ ವರದಿ ಮಂಡಿಸಿದರು, ಖಜಾಂಚಿ ಡಾ.ಹೇಮಂತ್ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ರಜಿತ ಕಾರ್ಯಪ್ಪ ಸ್ವಾಗತಿಸಿದರೆ, ನಿರ್ದೇಶಕರಾದ ಮಂಜುನಾಥ್ ಪ್ರಾರ್ಥಿಸಿ, ರವಿ ಕುಮಾರ್ ವಂದಿಸಿದರು.
ಈ ಸಂದರ್ಭ ಉಪಾಧ್ಯಕ್ಷ ಪುತ್ತಂ ಪ್ರದೀಪ್, ನಿರ್ದೇಶಕರಾದ ಕಿಶೋರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಪಾರ್ಥ ಚಿಣ್ಣಪ್ಪ, ನಿರ್ದೇಶಕ ಕೋಲತಂಡ ರಘು ಮಾಚಯ್ಯ ಹಾಗೂ ಸಂತೋಷ್ ರೈ ಸೇರಿದಂತೆ, ಪತ್ರಕರ್ತರ ಕುಟುಂಬದವರು, ಮತ್ತಿತರರು ಉಪಸ್ಥಿತರಿದ್ದರು.










