ಬೆಂಗಳೂರು ಜು.23 NEWS DESK : ಪೊಲೀಸ್ ಸಮವಸ್ತ್ರದಲ್ಲಿರುವ ಫೋಟೋ, ರೀಲ್ಸ್ ಮಾಡುವುದು, ಸ್ಟೇಟಸ್ ಅಪ್‌ಡೇಟ್ ಮಾಡುವುದು ಮತ್ತು ಸ್ಟೋರಿಗಳನ್ನು ಹಾಕುವುದು ಸೇರಿದಂತೆ ಇಲಾಖೆ ಸಂಬಂಧಿಸದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡದಂತೆ ಎಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಸಮವಸ್ತ್ರದಲ್ಲಿಯೇ ರೀಲ್ಸ್ ಮಾಡಿರುವ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸ್ ಆಯುಕ್ತರು ಈ ಕ್ರಮ ತೆಗೆದುಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ದಯಾನಂದ ಅವರು, ಸಮವಸ್ತ್ರದಲ್ಲಿರುವಾಗ ತಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸಂಬಂಧವಿಲ್ಲದ ರೀಲ್ಸ್ ಗಳನ್ನು ಪೋಸ್ಟ್ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು.
“ಪೊಲೀಸ್ ಸಮವಸ್ತ್ರವು ಸಾರ್ವಜನಿಕರ ಬಗೆಗಿನ ಬದ್ಧತೆ, ಸಮರ್ಪಣೆ ಮತ್ತು ಹೊಣೆಗಾರಿಕೆಯ ಸಂಕೇತವಾಗಿದೆ. ಅದನ್ನು ಧರಿಸುವಾಗ ನಾವು ಅತ್ಯಂತ ಕಾಳಜಿ ವಹಿಸಬೇಕು ಮತ್ತು ಗಂಭೀರವಾಗಿರಬೇಕು. ಸಮವಸ್ತ್ರದಲ್ಲಿರುವಾಗ ಅನುಚಿತವಾದ ವಿಷಯವನ್ನು ಪ್ರಸಾರ ಮಾಡುವುದರಿಂದ ಪ್ರತಿಷ್ಠೆಗೆ ಕುಂದು ತರುತ್ತದೆ.’’ಎಂದರು.
ಯಾವುದೇ ಪೊಲೀಸ್ ಸಿಬ್ಬಂದಿ ಪೊಲೀಸ್ ಸಮವಸ್ತ್ರದಲ್ಲಿರುವಾಗ ಯಾವುದೇ ರೀತಿಯ ವಿಡಿಯೋಗಳು, ರೀಲ್ಸ್ ಅಥವಾ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡದಂತೆ ಖಚಿತಪಡಿಸಿಕೊಳ್ಳಲು ಎಲ್ಲಾ ನಗರ ಘಟಕದ ಮುಖ್ಯಸ್ಥರು, ಪೊಲೀಸ್ ಉಪ ಆಯುಕ್ತರು(ಡಿಸಿಪಿ) ಮತ್ತು ಸಹಾಯಕ ಪೊಲೀಸ್ ಕಮಿಷನರ್‌ಗಳಿಗೆ(ಎಸಿಪಿ) ಆಯುಕ್ತರು ಸೂಚಿಸಿದ್ದಾರೆ.
ಮೇಲಿನ ನಿರ್ದೇಶನಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ರೀಲ್ ಮಾಡುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.