ಮಡಿಕೇರಿ ಜು.23 NEWS DESK : ಕೇಂದ್ರದ ವಿತ್ತ ಸಚಿವರಾದ ನಿರ್ಮಲಾ ಸೀತರಾಮನ್ ಅವರು ಏಳನೇ ಬಾರಿಗೆ ಮಂಡಿಸಿರುವ ಬಜೆಟ್ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಿರುವ ವಿಕಸಿತ ಭಾರತದ ದೃಷ್ಟಿಕೋನದ ಬಜೆಟ್ ಆಗಿದೆ ಎಂದು ಕೊಡಗು ಜಾತ್ಯತೀತ ಜನತಾದಳದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೂಟೆರ ಪುಷ್ಪಾವತಿ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ವಿಕಸಿತ ಭಾರತದ ದೃಷ್ಟಿಕೋನದಿಂದ ಕೂಡಿರುವ ಮತ್ತು ಸರ್ವ ಕ್ಷೇತ್ರಗಳಿಗೂ ಆದ್ಯತೆ ನೀಡಿರುವ ಪರಿಪೂರ್ಣ ಬಜೆಟ್ ಇದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು, ಮಹಿಳೆಯರು, ಯುವ ಜನತೆ, ನಿರುದ್ಯೋಗಿಗಳು, ಮಧ್ಯಮ ಆದಾಯ (ವೇತನ) ಪಡೆಯುತ್ತಿರುವ ಉದ್ಯೋಗಿಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಆದಾಯ ತೆರಿಗೆ ಲೆಕ್ಕಚಾರ ಮತ್ತು ಸರಳೀಕರಣ ಉತ್ತಮ ಕ್ರಮವಾಗಿದೆ. ಆದಾಯದ ಮಿತಿ ರೂ.7 ಲಕ್ಷಕ್ಕೆ ಏರಿಕೆ ಮಾಡಿರುವುದರಿಂದ ಮಧ್ಯಮ ವೇತನ ಪಡೆಯುವ ಉದ್ಯೋಗಿಗಳಿಗೆ ತೆರಿಗೆ ಭಾರ ಕಡಿಮೆಯಾಗುತ್ತದೆ. ಮಧ್ಯಮ ವರ್ಗದ ಜನರ ಜೀವನ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಯುವಕರಿಗೆ 4 ಕೋಟಿ ಉದ್ಯೋಗ ಸೃಷ್ಟಿ, ಕೌಶಲ್ಯ ತರಬೇತಿ, ಶಿಷ್ಯ ವೇತನ ನೀಡಿಕೆ, ಉದ್ಯೋಗಾಧಾರಿತ ಪ್ರೋತ್ಸಾಹ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಸ್ವಾಗತಾರ್ಹವಾಗಿದೆ. ಆಮದು ಶುಲ್ಕ ಇಳಿಕೆಯಿಂದ ಚಿನ್ನದ ಮೇಲೆ ಹೂಡಿಕೆದಾರರಿಗೆ ಮತ್ತು ಚಿನ್ನ ಖರೀದಿಸುವವರಿಗೆ ಅನುಕೂಲವಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣದಿಂದ ವಸತಿ ರಹಿತ ಬಡವರ ಸ್ವಂತ ಮನೆ ಹೊಂದುವ ಕನಸು ನನಸಾಗಲಿದೆ.
ಶಿಕ್ಷಣ ಸಾಲ ಸೌಲಭ್ಯದ ಮಿತಿ ರೂ.10 ಲಕ್ಷಕ್ಕೆ ಏರಿಕೆ ಮಾಡಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಇದರಿಂದ ಪೋಷಕರ ಆರ್ಥಿಕ ಹೊರೆ ಕಡಿಮೆಯಾಗಲಿದೆ.
ಸ್ಟ್ರೀಟ್ ಫುಡ್ ಹಬ್ ನಿರ್ಮಾಣ, ಮುದ್ರಾ ಸಾಲದ ಮಿತಿ ರೂ.20 ಲಕ್ಷಕ್ಕೆ ಏರಿಕೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿರುವುದರಿಂದ ನಿರುದ್ಯೋಗದ ಸಮಸ್ಯೆಗೆ ಪರಿಹಾರ ದೊರೆತಂತ್ತಾಗುತ್ತದೆ. ಶಿಕ್ಷಣ, ಆರೋಗ್ಯ, ಸಾರಿಗೆ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಕ್ಯಾನ್ಸರ್ ಔಷಧಿಯ ಬೆಲೆ ಕಡಿಮೆಯಾಗಲಿದೆ. ದೇಶದ ಸಾಲದ ಹೊರೆಯನ್ನು ಶೇ.4.9ರಷ್ಟು ಇಳಿಕೆ ಮಾಡಲಾಗಿದೆ. ಒಟ್ಟಿನಲ್ಲಿ ಇದೊಂದು ಸಮತೋಲಿತವಾದ ಉತ್ತಮ ಬಜೆಟ್ ಎಂದು ಪುಷ್ಪಾವತಿ ರಮೇಶ್ ತಿಳಿಸಿದ್ದಾರೆ.