ಮಡಿಕೇರಿ ಜು.24 NEWS DESK : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಆರ್ಥಿಕ ಬೆನ್ನೆಲುಬಾಗಿರುವ ಕಾಫಿ ಫಸಲಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಜಿಲ್ಲೆಯ ವಿವಿಧೆಡೆ ಹಲವು ತೋಟಗಳಲ್ಲಿ ಅತಿಯಾದ ಮಳೆೆಯಿಂದ ಉಂಟಾಗಿರುವ ಶೀತದ ವಾತಾವರಣದಿಂದ ಕಾಫಿ ಕಾಯಿಗಳು ಕೊಳೆತು ಉದುರಲಾರಂಭಿಸಿವೆ.
ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಸರಾಸರಿ 68 ಇಂಚು ಮಳೆ ದಾಖಲಾಗಿದ್ದರೆ, ಮಡಿಕೇರಿ ತಾಲ್ಲೂಕಿನಲ್ಲಿ ದಾಖಲೆಯ 95 ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 74 ಇಂಚು, ವಿರಾಜಪೇಟೆ ತಾಲ್ಲೂಕಿನಲ್ಲಿ 64, ಪೊನ್ನಂಪೇಟೆ 64 ಇಂಚು, ಕುಶಾಲನಗರ ತಾಲ್ಲೂಕಿನಲ್ಲಿ 42 ಇಂಚಿನಷ್ಟು ಮಳೆ ದಾಖಲಾಗಿದೆ.
ಅಂಕಿಅಂಶಗಳ ಆಧಾರದಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ ಅತೀ ಹೆಚ್ಚಿನ ಮಳೆಯಾಗಿದ್ದರೆ ಸಂಪಾಜೆ ಹೋಬಳಿ, ಭಾಗಮಂಡಲ, ನಾಪೋಕ್ಲು, ಶಾಂತಳ್ಳಿ, ಹುದಿಕೇರಿ, ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳು ಮತ್ತು ಸೋಮವಾರಪೇಟೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಳೆಯಾಗಿದೆ.
ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಗಾಳಿ ಸಹಿತ ಧಾರಾಕಾರ ಮಳೆಗೆ ಪ್ರವಾಹದ ರೂಪದಲ್ಲಿ ತೋಟ ಮತ್ತು ಗದ್ದೆಗಳಿಗೆ ನೀರು ಹರಿದು ಕೃಷಿ ಫಸಲು ಸಂಪೂರ್ಣ ನಾಶವಾಗಿದೆ. ಗದ್ದೆಗಳು ಮುಳುಗಡೆಗೊಂಡಿದ್ದರೆ, ಅಧಿಕ ಮಳೆಯಿಂದ ತೋಟಗಳಲ್ಲಿ ಎಲೆ ಸಹಿತ ಕಾಫಿ ಕಾಯಿಗಳು ಕೊಳೆಯುತ್ತಿವೆ.
ಕಾಫಿ ಕಾಯಿ ಕಟ್ಟಿ ಬೆಳೆಯುವ ಅತ್ಯಂತ ಸೂಕ್ಷö್ಮವಾದ ಈ ಅವಧಿಯಲ್ಲಿ ಕಾಫಿ ಗಿಡಗಳಲ್ಲಿನ ಕಾಫಿ ಕಾಯಿಗಳ ಇಡೀ ಗೊಂಚಲು ಕೊಳೆ ರೋಗಕ್ಕೆ ಸಿಲುಕಲಾರಂಭಿಸಿದೆ. ಹಲವೆಡೆಗಳಲ್ಲಿ ಕಾಫಿ ಕಾಯಿ ಉದುರಿ ಬೆಳೆಗಾರನನ್ನು ತೀವ್ರ ಆತಂಕಕ್ಕೆ ತಳ್ಳಿದೆ.
::: ಗಾಯದ ಮೇಲೆ ಬರೆ :::
ಪ್ರಸಕ್ತ ಸಾಲಿನ ಫೆಬ್ರವರಿ ಮಾರ್ಚ್ ತಿಂಗಳಿನಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಬೆಳೆಗಾರನ ನಿರೀಕ್ಷೆಯ ‘ಹೂ ಮಳೆ’ಯಾಗಿಲ್ಲ. ಇದರಿಂದ ಸಾಕಷ್ಟು ಕಾಫಿ ತೋಟಗಳಲ್ಲಿ ಗಿಡಗಳಲ್ಲಿ ಅರಳಲು ಕಾಯ್ದು ಕುಳಿತಿದ್ದ ಕಾಫಿ ಹೂಗಳು ಕರಟಿ ಹೋದವು. ಉಳಿದ ಹೂಗಳು ತಡವಾಗಿ ಸುರಿದ ಮಳೆಯಿಂದ ಅರಳಿ ಬೆಳೆಗಾರನಿಗೆ ಕೊಂಚ ನೆಮ್ಮದಿಯನ್ನು ತಂದಿತ್ತು. ಆದರೆ, ಇದೀಗ ಎಡೆ ಬಿಡದೆ ಸುರಿದ ಭಾರೀ ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾಫಿ ತೋಟಗಳಲ್ಲಿ ಇರುವ ಕಾಫಿ ಕಾಯಿಗಳು ಕೊಳೆತು ಉದುರಲು ಕಾರಣವಾಗುವ ಮೂಲಕ ಮುಂದಿನ ಇಳುವರಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿಯಲ್ಲಿದೆ.
ಪ್ರಾಕೃತಿಕ ವೈಫರೀತ್ಯಗಳಿಂದ ಮುಂದಿನ ಸಾಲಿನ ಕಾಫಿ ಫಸಲು ತೀವ್ರ ಕುಸಿತಕ್ಕೆ ಒಳಗಾಗುವ ಸಾಧ್ಯತೆಗಳು ಗೋಚರಿಸಲಾರಂಭಿಸಿದೆ. ಪ್ರಸಕ್ತ ಸಾಲಿನಲ್ಲಿ ಕಾಫಿಗೆ ಅತ್ಯುತ್ತಮ ಮತ್ತು ದಾಖಲೆಯ ದರ ಲಭ್ಯವಾಗಿದೆ. ಇದೇ ದರ ಮುಂದಿನ ಸಾಲಿನಲ್ಲಿಯೂ ಇರಬಹುದೆನ್ನುವ ನಿರೀಕ್ಷೆ ಬೆಳೆಗಾರರಲ್ಲಿದೆ. ಆದರೆ, ಅತಿವೃಷ್ಟಿಯಿಂದ ನಿರೀಕ್ಷೆಯ ಫಸಲು ಕೈಗೆಟುಕದಿದ್ದಲ್ಲಿ ಉತ್ತಮ ಧಾರಣೆ ಇದ್ದರು ಬೆಳೆಗಾರ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದೆ.
::: ಆರ್ಥಿಕ ಹೊಡೆತ :::
ಕೊಡಗು ಜಿಲ್ಲೆ ರಾಷ್ಟ್ರದಲ್ಲೆ ಅತೀ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆಯಾಗಿದೆ. ಇಲ್ಲಿ ಬೆಳೆಯುವ ಕಾಫಿ ಕೇವಲ ಬೆಳೆಗಾರನನ್ನಷ್ಟೆ ಅಲ್ಲ ಅದನ್ನು ಅವಲಂಭಿಸಿದ ಕಾರ್ಮಿಕ ಸಮೂಹ, ವ್ಯಾಪಾರಸ್ಥರ ಉತ್ತಮ ಬದುಕಿಗೂ ಸಹಕಾರಿಯಾಗಿದೆ. ಒಂದೊಮ್ಮೆ ಕಾಫಿ ಫಸಲು ಕುಸಿದಲ್ಲಿ ಅನಿವಾರ್ಯವಾಗಿ ಜಿಲ್ಲೆಯ ಕಾಫಿ ತೋಟಗಳ ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಬೆಳೆಗಾರ ಅದರಲ್ಲು ಸಣ್ಣ ಬೆಳೆಗಾರ ಕಳೆದುಕೊಳ್ಳುತ್ತಾನೆ. ಇದರಿಂದ ತೋಟದ ಕೆಲಸ ಕಾರ್ಯಗಳು ಕಡಿಮೆಯಾಗುತ್ತದೆ, ಇದರ ನೇರ ಹೊಡೆತ ಬೀಳುವುದು ಕಾರ್ಮಿಕ ಸಮೂಹದ ಮೇಲೆ. ನಂತರ ಇದರ ಪರಿಣಾಮ ನಿಧಾನವಾಗಿಯಾದರು ವಾಣಿಜ್ಯೋದ್ಯಮ ಸೇರಿದಂತೆ ಒಟ್ಟು ಕಾಫಿ ನಾಡಿನ ಮೇಲೆ ಬೀರುವುದರಲ್ಲಿ ಸಂದೇಹವಿಲ್ಲ.
::: ದಕ್ಷಿಣ ಕೊಡಗು ತತ್ತರ :::
ದಕ್ಷಿಣ ಕೊಡಗಿನ ಪೊನ್ನಂಪೇಟೆ ಶ್ರೀಮಂಗಲ, ಗೋಣಿಕೊಪ್ಪ, ಕಾನೂರು, ಕಿರುಗೂರು, ಹುದಿಕೇರಿ, ಬಿರುನಾಣಿ, ತೆರಾಲು, ಬಿ.ಶೆಟ್ಟಿಗೇರಿ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಕಾಫಿ ಫಸಲು ಸಂಪೂರ್ಣ ಕೊಳೆತು ಉದುರುತ್ತಿವೆ.